30 ಜಿಲ್ಲೆಗಳಲ್ಲೂ ಗಾಂಧಿ ಭವನ: ಸಿಎಂ ಕುಮಾರಸ್ವಾಮಿ

ಬೆಂಗಳೂರು, ಅ.2-ರಾಜ್ಯದ 30 ಜಿಲ್ಲೆಗಳಲ್ಲೂ ಗಾಂಧಿ ಭವನ ನಿರ್ಮಿಸಲು ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಗಾಂಧಿಭವನದಲ್ಲಿ ಮಹಾತ್ಮಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಛಾಯಾಚಿತ್ರ ಪ್ರದರ್ಶನ ಹಾಗೂ ಇತರ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಾಂಧಿ ಭವನ ನಿರ್ಮಿಸಲು ಕೆಲವು ಜಿಲ್ಲೆಗಳಲ್ಲಿ ಜಾಗಗಳನ್ನು ಗುರುತಿಸಲಾಗಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಜಾಗ ಸಿಗಬೇಕಿದೆ. ನಮ್ಮ ಸರ್ಕಾರ ಜಾಗ ಒದಗಿಸಿ 30 ಜಿಲ್ಲೆಗಳಲ್ಲೂ ಗಾಂಧಿಭವನ ನಿರ್ಮಿಸಲು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಗಾಂಧಿ ಕನಸು ನನಸಿಗೆ ಪ್ರಯತ್ನ:
ಮಧ್ಯರಾತ್ರಿ ಮಹಿಳೆಯೊಬ್ಬರು ನಿರ್ಭೀತಿಯಿಂದ ಓಡಾಡುವಂತಹ ವಾತಾವರಣ ನಿರ್ಮಾಣವಾಗಬೇಕು ಎಂಬುದು ಗಾಂಧೀಜಿಯವರ ಕನಸಾಗಿತ್ತು. ಕರ್ನಾಟಕದಲ್ಲಿ ಆ ಕನಸನ್ನು ನನಸು ಮಾಡಲು ನಾನು ಹೆಜ್ಜೆ ಇಟ್ಟಿದ್ದೇನೆ. ಜನರು ನೆಮ್ಮದಿಯಿಂದ ಜೀವಿಸಬೇಕಾದರೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು, ಮಾಫಿಯಾಗಳನ್ನು ಮಟ್ಟಹಾಕಬೇಕು. ಅದಕ್ಕಾಗಿ ನಾನು ಕೆಲವು ಖಡಕ್ ಪೆÇಲೀಸ್ ಅಧಿಕಾರಿಗಳನ್ನು ಬೆಂಗಳೂರಿಗೆ ನಿಯೋಜನೆ ಮಾಡಿದ್ದೇನೆ. ಯಾವುದೇ ಒತ್ತಡಕ್ಕೆ ಮಣಿಯದಂತೆ ಜನರ ನೆಮ್ಮದಿಗಾಗಿ ಕೆಲಸ ಮಾಡಲು ಸೂಚನೆ ನೀಡಿದ್ದೇನೆ. ಒಂದು ವೇಳೆ ನಾನೇ ಕರೆ ಮಾಡಿ ಹೇಳಿದರೂ ನೀವು ತೆಗೆದುಕೊಂಡ ಕ್ರಮಗಳನ್ನು ಕೈ ಬಿಡಬೇಡಿ ಎಂದು ಪೆÇಲೀಸರಿಗೆ ಸೂಚನೆ ನೀಡಿದ್ದೇನೆ. ಹೆಣ್ಣು ಮಕ್ಕಳ ರಕ್ಷಣೆ ನಮ್ಮ ಮೊದಲ ಆದ್ಯತೆ. ಮೈತ್ರಿ ಸರ್ಕಾರ ಈ ನಿಟ್ಟಿನಲ್ಲಿ ಸದಾ ನಿಮ್ಮ ಜೊತೆಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಕೋಟಿ ಕೋಟಿ ಹಣವನ್ನು ಇಟ್ಟು ಇಸ್ಪೀಟ್ ಆಡುತ್ತಿದ್ದಾರೆ. ಅವುಗಳನ್ನೆಲ್ಲ ನಿಯಂತ್ರಣ ಮಾಡಲು ಸೂಚಿಸಿದ್ದೇನೆ. ಅಪರಾಧ ಚಟುವಟಿಕೆಗಳನ್ನು ಸಂಪೂರ್ಣ ಮಟ್ಟ ಹಾಕಲು ತಾಕೀತು ಮಾಡಿದ್ದೇನೆ. ಎಷ್ಟೇ ಖರ್ಚಾದರೂ ಚಿಂತೆಯಿಲ್ಲ. ಬೆಂಗಳೂರಿನ ಪ್ರತಿಯೊಂದು ರಸ್ತೆಯಲ್ಲೂ ಸಿಸಿ ಟಿವಿ ಅಳವಡಿಸಲಾಗುತ್ತದೆ. ಇತರ ನಗರಗಳಲ್ಲೂ ಭದ್ರತೆಗಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು, ಜನರ ಭದ್ರತೆ ನಮ್ಮ ಸರ್ಕಾರದ ಮುಖ್ಯ ಧ್ಯೇಯ ಎಂದು ಹೇಳಿದರು.

ಈ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಸಾರಾಯಿ ನಿಷೇಧ ಮಾಡುವ ಕಠಿಣ ನಿರ್ಧಾರ ತೆಗೆದುಕೊಂಡವನು ನಾನು. ಪ್ರಸ್ತುತ ಸಂದರ್ಭದಲ್ಲಿ ಬಾರ್ ಲೈಸೆನ್ಸ್ ಕೊಡಲು ಸೂಚಿಸಿದ್ದೇನೆ ಎಂಬ ವರದಿಗಳಾಗಿವೆ. ಮಾಧ್ಯಮಗಳು ಕುಮಾರಸ್ವಾಮಿಯವರಿಗೆ ಎರಡು ಮುಖಗಳಿವೆ ಎಂದು ಬಿಂಬಿಸುತ್ತಿವೆ. ನಾನು ಯಾವುದೇ ಕಾರಣಕ್ಕೂ ಹೊಸ ಬಾರ್‍ಗಳಿಗೆ ಲೈಸೆನ್ಸ್ ಕೊಡುವುದಿಲ್ಲ. ಅಧಿಕಾರಿಗಳು ಜನಸಂಖ್ಯೆಗನುಗುಣವಾಗಿ ಲೆಕ್ಕಾಚಾರ ಹಾಕಿ ಹೊಸ ಬಾರ್ ಲೈಸೆನ್ಸ್ ಕೊಡಲು ಚಿಂತನೆ ನಡೆಸಿದ್ದರು. ಆದರೆ ಆ ಪ್ರಸ್ತಾವನೆ ನನ್ನ ಮುಂದೆ ಬಂದಿಲ್ಲ, ಬಂದರೂ ಅವಕಾಶ ಕೊಡುವುದಿಲ್ಲ. ಮಾಧ್ಯಮಗಳು ಸತ್ಯಾಸತ್ಯತೆಯನ್ನು ಅರಿತುಕೊಂಡು ವರದಿ ಮಾಡಬೇಕು ಎಂದು ಸಲಹೆ ನೀಡಿದರು.

ಜನರ ತೆರಿಗೆ ಹಣವನ್ನು ಪೆÇೀಲು ಮಾಡದೆ ದಕ್ಷತೆಯಿಂದ ಕೆಲಸ ಮಾಡಲು ನಮ್ಮ ಸರ್ಕಾರ ಪಣತೊಟ್ಟಿದೆ. ಅದಕ್ಕೆ ನಿಮ್ಮ ಸಹಕಾರ ಮತ್ತು ಶ್ರೀರಕ್ಷೆ ಬೇಕು ಎಂದರು.
ಗಾಂಧೀಜಿಯವರ 150ನೇ ಜನ್ಮದಿನಾಚರಣೆಯಲ್ಲಿ ಮುಖ್ಯಮಂತ್ರಿಯಾಗಿ ಭಾಗಿಯಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ. 12 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿ ಇಲ್ಲಿಗೆ ಬಂದಿದ್ದೆ. ಆ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮದಲ್ಲಿ ಯುವಕರು ಭಾಗವಹಿಸುತ್ತಿರಲಿಲ್ಲ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿದ್ದಾರೆ. ಇದು ಮತ್ತಷ್ಟು ಸಂತೋಷ ಹೆಚ್ಚಿಸಿದೆ. ಈ ಹಿಂದೆ ಗಾಂಧಿ ಭವನ ಅವ್ಯವಸ್ಥೆಯಿಂದ ಕೂಡಿತ್ತು. ವಯಸ್ಸಾದವರಿಗೆ ಗಾಂಧಿ ಭವನಕ್ಕೆ ಬರಲು ಕಷ್ಟವಾಗುತ್ತಿತ್ತು. ಅದನ್ನು ಮನಗಂಡು ಕೂಡಲೇ ದುರಸ್ತಿ ಮಾಡುವಂತೆ ಬಿಡಿಎ ಆಯುಕ್ತರಿಗೆ ಸೂಚನೆ ನೀಡಿದ್ದೆ. ಅದಕ್ಕಾಗಿ ಒಂದು ಕೋಟಿ ರೂ.

ಅನುದಾನವನ್ನೂ ಬಿಡುಗಡೆ ಮಾಡಿದ್ದೆ. ಗಾಂಧಿ ಭವನ ಈಗ ಉತ್ತಮ ಸ್ಥಿತಿಯಲ್ಲಿದೆ. ಇಲ್ಲಿ ಪ್ರತಿದಿನವೂ ಒಂದೊಂದು ಚಟುವಟಿಕೆಗಳು ನಡೆಯಬೇಕು ಎಂಬುದು ನನ್ನ ಆಶಯ ಎಂದರು.
ಕೇಂದ್ರ ಮಾಜಿ ಸಚಿವ ಎಂ.ವಿ.ರಾಜಶೇಖರನ್, ರಾಜ್ಯ ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಮುಖಂಡರಾದ ವೂಡೇ ಪಿ.ಕೃಷ್ಣ, ಇಂದಿರಾ ಕೃಷ್ಣಪ್ಪ ಮತ್ತಿತರರು ಭಾಗವಹಿಸಿದ್ದರು.
ಸಾಹಿತಿ ಬೊಳುವಾರು ಮಹಮ್ಮದ್ ಕುಂಞ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ