
ನಿರ್ದೇಶಕ ಆಕಾಶ್ ಶ್ರೀವತ್ಸ ಮತ್ತೊಂದು ಸಿನಿಮಾ ತಯಾರಿಯ ಉತ್ಸಾಹದಲ್ಲಿದ್ದಾರೆ. ಆಕ್ಸಿಡೆಂಟ್ ಚಿತ್ರದಲ್ಲಿ ರಮೇಶ್ ಅರವಿಂದ್ ಅವರೊಂದಿಗಿದ್ದ ಯುವ ಪ್ರತಿಭೆ, ಈಗ ತಮ್ಮ ನೆಚ್ಚಿನ ನಟನಿಗೆ ನಿರ್ದೇಶನ ಮಾಡುವುದಕ್ಕೆ ಸಜ್ಜುಗೊಂಡಿದ್ದಾರೆ.
ರಮೇಶ್ ಅರವಿಂದ್ ಅವರೊಂದಿಗೆ ಸಾಕಷ್ಟು ಸ್ಕ್ರಿಪ್ಟ್ ಗಳ ಬಗ್ಗೆ ಚರ್ಚೆ ನಡೆಸಿದ್ದಾಗಿ ಹೇಳಿರುವ ಆಕಾಶ್, ಈಗ ತಾವು ಕೈಗೆತ್ತಿಕೊಳ್ಳುತ್ತಿರುವ ಚಿತ್ರಕಥೆ ರಮೇಶ್ ಅರವಿಂದ್ ಅವರಿಗೆ ಹೆಚ್ಚು ಸೂಕ್ತವಾಗಿತ್ತು ಎಂದಿದ್ದಾರೆ.
ರಮೇಶ್ ಅರವಿಂದ್ ಅವರೊಂದಿಗೆ ಅಂತಿಮ ಹಂತದ ಮಾತುಕತೆ ನಡೆಸಿರುವ ನಿರ್ದೇಶಕ ಆಕಾಶ್, ನವೆಂಬರ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಿಸುವ ಚಿಂತನೆಯಲ್ಲಿದ್ದಾರೆ. ಇನ್ನಷ್ಟೇ ಶೀರ್ಷಿಕೆ ಅಂತಿಮಗೊಳಿಸಬೇಕಾದ ಚಿತ್ರದಲ್ಲಿ ರಮೆಶ್ ಅರವಿಂದ್ ತನಿಖಾಧಿಕಾರಿಯ ಪಾತ್ರದಲ್ಲಿ ನಟಿಸಿದ್ದು, ಚಿತ್ರದ್ಲಲಿ ಇಬ್ಬರು ಪ್ರಬಲ ಮಹಿಳಾ ಪಾತ್ರಗಳೂ ಇರಲಿವೆ.
ಅಭಿಜಿತ್ ವೈಆರ್ ಚಿತ್ರ ಕಥೆ ಹೆಣೆದಿದ್ದು, ಜುದಾ ಸ್ಯಾಂಡಿಯ ಸಂಗೀತ ಚಿತ್ರಕ್ಕೆ ಇರಲಿದೆ. ಚಿತ್ರಕಥೆ ಅಂತಿಮಗೊಂಡಿದ್ದು ಉಳಿದ ಪಾತ್ರಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ. ಏತನ್ಮಧ್ಯೆ ಸೂಕ್ತ ಟೈಟಲ್ ಗೆ ಹುಡುಕಾಟ ನಡೆಸಿದ್ದೇನೆ ಎಂದು ಆಕಾಶ್ ಹೇಳಿದ್ದಾರೆ.
ಇನ್ನು ಪ್ರಸ್ತುತ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸುತ್ತಿರುವ ರಮೆಶ್ ಅರವಿಂದ್, ಸಿನಿಮಾದತ್ತ ಮತ್ತೆ ಗಮನ ಹರಿಸಲು ಪ್ರಾರಂಭಿಸಿದ್ದಾರೆ. ಈಗ ಕ್ವೀನ್ ಸಿನಿಮಾದ ರಿಮೇಕ್ ನಡೆಯುತ್ತಿದ್ದು, ರಾಧಿಕಾ ಕುಮಾರಸ್ವಾಮಿ ಅವರ ನಿರ್ಮಾಣದ ಭೈರದೇವಿ ಸಿನಿಮಾ ಮುಕ್ತಾಯಗೊಂಡ ಬಳಿಕ ಆಕಾಶ್ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.