ಲಕ್ಷ್ಮೀಹೆಬ್ಬಾಳ್ಕರ್ ಗೆ ಮತ್ತೂಂದು ಶಾಕ್

ಬೆಳಗಾವಿ, ಅ.1- ಮೊನ್ನೆಯಷ್ಟೇ ಕುಂದಾನಗರಿ ರಾಜಕರಣದ ಬಿಸಿ ತಾರಕಕ್ಕೇರಿ ಜಾರಕಿಹೊಳಿ ಬ್ರದರ್ಸ್ ಹೆಬ್ಬಾಳ್ಕರ್ ವಿರುದ್ಧ ತಿರುಗಿ ಬಿದ್ದು ಹೈರಾಣಾಗಿಸಿದ್ದ ನಡುವೆಯೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀಹೆಬ್ಬಾಳ್ಕರ್ ಅವರಿಗೆ ಮತ್ತೂಂದು ಶಾಕ್ ಎದುರಾಗಿದೆ.
ಪ್ರತಿಷ್ಠಿತ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಹುದ್ದೆ ಬೇರೊಬ್ಬ ಮಹಿಳೆಯ ಪಾಲಾಗುವುದು ಬಹುತೇಕ ಖಚಿತವಾಗಿದೆ. ಸದ್ಯ ಲಕ್ಷ್ಮೀಹೆಬ್ಬಾಳ್ಕರ್ ಶಾಸಕಿಯಾಗಿದ್ದು, ರಾಜ್ಯ ಸುತ್ತಿ ಸಂಘಟನೆ ಮಾಡುವುದು ಕಷ್ಟ ಎಂದು ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ಸುಶ್ಮಿತಾ ದೇವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಬೆಳಗಾವಿ ರಾಜಕಾರಣ ವಿಚಾರದಲ್ಲದ ವಿವಾದ ಲಕ್ಷ್ಮೀಹೆಬ್ಬಾಳ್ಕರ್ ಬದಲಾಯಿಸಲು ಕಾರಣವಾಗಿದೆ ಎನ್ನಲಾಗಿದ್ದು, ಇದೀಗ ಸುಶ್ಮಿತಾ ದೇವ್ ರಾಜ್ಯ ಮಹಿಳಾ ಕಾಂಗ್ರೆಸ್ ಹುದ್ದೆಗೆ ನಾಲ್ವರು ಮಹಿಳೆಯರ ಹೆಸರನ್ನು ಪಟ್ಟಿ ಮಾಡಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಹೊಸಕೋಟೆಯ ಕಮಲಾಕ್ಷಿ ರಾಜಣ್ಣ ಎಸ್‍ಸಿ ಕೋಟಾದಡಿ ಲಾಭಿ ನಡೆಸಿದ್ದು, ಇವರಿಗೆ ಸಂಸದ ವೀರಪ್ಪ ಮೊಯಿಲಿ, ಪರಮೇಶ್ವರ್ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.

ಒಬಿಸಿ ಕೋಟಾದಡಿ ಮೈಸೂರಿನ ಪುಷ್ಪ ಅಮರನಾಥ್‍ಗೆ ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದ ಧೃವನಾರಾಯಣ್ ಬೆಂಬಲವಿದೆ, ಒಕ್ಕಲಿಗ ಕೋಟಾದಡಿ ತುಮಕೂರಿನ ಗೀತಾ ರಾಜಣ್ಣ ಅವರಿಗೆ ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಕೃಪಾಕಟಾಕ್ಷವಿದ್ದು, ಕುರುಬ ಕೋಟಾದಡಿ ನಾಗಲಕ್ಷ್ಮೀ ಚೌಧರಿ ಪರ ಒಳಗೊಳಗೆ ಸಿದ್ದರಾಮಯ್ಯ ಲಾಭಿ ನಡೆಸಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹುದ್ದೆಯ ಅವಧಿ ಮುಗಿದು ಮೂರು ತಿಂಗಳಾಗಿದ್ದು, ಮತ್ತೆ ಮೂರು ವರ್ಷ ತಾನೇ ಮುಂದುವರೆಯಲು ಕಸರತ್ತು ಮಾಡುತ್ತಿರುವ ಲಕ್ಷ್ಮೀ ಖಾಸಗಿ ಹೋಟೆಲ್‍ನಲ್ಲಿ ಕೆಲ ದಿನಗಳ ಹಿಂದೆ ಆಯ್ದ ಮಹಿಳಾ ಕಾಂಗ್ರೆಸ್ ನಾಯಕಿಯರ ಸಭೆ ನಡೆಸಿದ್ದರು.
ಆದರೆ ರಾಷ್ಟ್ರೀಯ ಅಧ್ಯಕ್ಷೆ ಸುಶ್ಮಿತಾ ದೇವ್ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ರಾಜ್ಯ ಮಹಿಳಾ ಕಾಂಗ್ರೆಸ್ ಹುದ್ದೆಯಿಂದ ಕೆಳಗಿಳಿಸಲೇಬೇಕೆಂದು ಪಣ ತೊಟ್ಟಿದ್ದಾರೆ ಎನ್ನಲಾಗಿದೆ.
ಹಾಗಾಗಿ ನಾಲ್ವರು ಮಹಿಳೆಯರ ಹೆಸರನ್ನು ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ನಾಲ್ವರೂ ಕೂಡ ಅಧ್ಯಕ್ಷ ಹುದ್ದೆಗೆ ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಒಟ್ಟಿನಲ್ಲಿ ಕುಂದಾನಗರಿಯ ರಾಜಕಾರಣಕ್ಕಿಂತ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮತ್ತೊಂದು ಶಾಕ್ ತೆರೆ ಮರೆಯಲ್ಲಿ ನಡೆಯುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ