ಕರ್ನಾಟಕ ಜೀವ ರಕ್ಷಕರ ಕಾನೂನು ರಕ್ಷಣಾ ಮಸೂದೆ ಜಾರಿಗೆ

ಬೆಂಗಳೂರು, ಅ.1- ಅಪಘಾತಕ್ಕೆ ಒಳಗಾದವರಿಗೆ ತಕ್ಷಣ ಚಿಕಿತ್ಸೆ ಕೊಡಿಸಲು ಹಾಗೂ ಗಾಯಾಳುಗಳ ರಕ್ಷಣೆಗೆ ರಾಜ್ಯ ಸರ್ಕಾರದ ಕರ್ನಾಟಕ ಜೀವ ರಕ್ಷಕರ ಕಾನೂನು ರಕ್ಷಣಾ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿರುವುದಿಂದ ಕಾಯ್ದೆ ರಾಜ್ಯದಲ್ಲಿ ಜಾರಿಗೆ ಬಂದಿದೆ. ಆದರೆ ಬಳ್ಳಾರಿ ಜಿಲ್ಲೆಯ ತೋರಣಗಲ್ ಪೆÇಲೀಸರು ಇಂತಹ ಜನಜಾಗೃತಿಯ ಕೆಲಸವನ್ನು 2017, ಫೆ.27ರಿಂದಲೇ ಸದ್ದಿಲ್ಲದೇ ಮಾಡಿಕೊಂಡು ಬರುತ್ತಿದ್ದಾರೆ. ಈ ಸಂಬಂಧ ಉಪಕ್ರಮವೊಂದನ್ನು ಜಾರಿಗೆ ತಂದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಸುಪ್ರೀಂ ಕೋರ್ಟ್ ಜಾರಿಗೊಳಿಸಿರುವ ಒಳ್ಳೆಯ ಸಾಮರಸ್ಯದ ಕಾನೂನು (ಗುಡ್ ಸಮರೀಟನ್ ಲಾ) ಪಾಲಿಸುವ ಭಾಗವಾಗಿ `ಆಂಬ್ಯುಲೆನ್ಸ್ ಗೆ ದಾರಿಮಾಡಿಕೊಡಿ’, `ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ’ ಎಂಬ ಪರಿಕಲ್ಪನೆಯೊಂದಿಗೆ ತೋರಣಗಲ್ ಪೆÇಲೀಸರು, ಕಳೆದ ವರ್ಷ ಜಾರಿಗೊಳಿಸಿದ್ದ ಯೋಜನೆಯಿಂದ ಈ ಭಾಗದ ಜನರಲ್ಲಿ ಸಾಕಷ್ಟು ಅರಿವು ಮೂಡಿದೆ.

ಗೀವ್ ವೇ ಟು ಆ್ಯಂಬುಲೆನ್ಸ್, ಶಿಫ್ಟ್ ಇಂಜೂರ್ ಟು ಹಾಸ್ಪಿಟಲ್ ಎಂಬ ಲೋಗೋವನ್ನು ಸಿದ್ಧಪಡಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ರಾಜ್ಯ ಸರಕಾರದ `ಹರೀಶ್ ಸಾಂತ್ವನ ಯೋಜನೆ’ಯನ್ನೂ ತೋರಣಗಲ್ ಠಾಣೆ ಪೆÇಲೀಸರು, ಈ ಹಿಂದೆಯೇ ಸಾಕಾರಗೊಳಿಸಿ ಗಮನಸೆಳೆದಿದ್ದರು. ಠಾಣೆ ವ್ಯಾಪ್ತಿಯ ಪ್ರತಿ ಊರಿನಲ್ಲಿ ಇಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿಗಳು ಅಪಘಾತ ತಡೆ ಹಾಗೂ ಅಪಘಾತದಲ್ಲಿ ಗಾಯಗೊಂಡವರ ರಕ್ಷಣೆ ಕುರಿತು ಜನಜಾಗೃತಿ ಮೂಡಿಸುತ್ತಿದ್ದಾರೆ.

ಠಾಣೆ ವ್ಯಾಪ್ತಿಯಲ್ಲಿ ನಡೆದ ಅಪಘಾತ ಸ್ಥಳಕ್ಕೆ ದಿಢೀರ್ ಧಾವಿಸುವ ಇಲ್ಲಿನ ಪಿಎಸ್‍ಐ ಮಹಮ್ಮದ್ ರಫಿ, ಗಾಯಾಳುಗಳ ರಕ್ಷಣೆ, ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಪರಿಯೇ ಇತರ ಸಿಬ್ಬಂದಿಗೆ ಬೆರುಗು ಹುಟ್ಟಿಸುವ ಜತೆಗೆ ಅವರನ್ನೂ ಇಂತಹ ಕೆಲಸಗಳಲ್ಲಿ ತೊಡಗಿಸಲು ಪ್ರೇರಣೆಯಾಗಿದೆ. ತೋರಣಗಲ್ ಠಾಣೆಯ ವಿಶಿಷ್ಟ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲೆಯ ಉಳಿದೆಲ್ಲಾ ಠಾಣೆಗಳಲ್ಲೂ ಈ ಪ್ರಯೋಗ ವಿಸ್ತರಿಸಲು ಪೆÇಲೀಸ್ ಇಲಾಖೆ ಕ್ರಮಕೈಗೊಂಡಿದೆ. ಈ ಠಾಣೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು, ಇಂತಹ ಜನಜಾಗೃತಿಯ ಕೆಲಸ ನಡೆಸುತ್ತಿರುವುದು ದೇಶದಲ್ಲೇ ಅತಿದೊಡ್ಡ ಜೆಎಸ್‍ಡಬ್ಲ್ಯು ಕಬ್ಬಿಣ ಕಾರ್ಖಾನೆ ತೋರಣಗಲ್ ಠಾಣೆ ವ್ಯಾಪಿಯಲ್ಲಿದೆ ಎಂಬುದು ವಿಶೇಷ.

ಈ ಜನಜಾಗೃತಿಗೆ ಜೆಎಸ್‍ಡಬ್ಲ್ಯು ಸಂಸ್ಥೆ, ಪೆÇಲೀಸರ ಜತೆ ಕೈಜೋಡಿಸಿದೆ. `ಆಂಬ್ಯುಲೆನ್ಸ್‍ಗೆ ದಾರಿಮಾಡಿಕೊಡಿ’, `ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ’ ಎಂಬ ಘೋಷ ವಾಕ್ಯಗಳನ್ನು ಹೊಂದಿರುವ 760 ಖಾಕಿ ಶರ್ಟ್‍ಗಳನ್ನು ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ವಿತರಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ತುರ್ತು ಕೆಲಸ ನಿರ್ವಹಿಸುವ ಆಂಬ್ಯುಲೆನ್ಸ್‍ಗೆ ತಕ್ಷಣ ದಾರಿಮಾಡಿಕೊಡುವಂತೆ ಈ ಚಾಲಕರಿಗೆ ತಿಳಿವಳಿಕೆ ನೀಡಲಾಗಿದೆ.
ಗೋಲ್ಡನ್ ಅವರ್ ಮಹತ್ವ ಸಾರುತ್ತಿರುವ ಪಿಎಸ್‍ಐ ಮಹಮ್ಮದ್ ರಫಿ:
ಅಪಘಾತವಾದ ಒಂದು ಗಂಟೆಯೊಳಗೆ ಗಾಯಾಳುಗಳು ಬದುಕುಳಿಯಲು ಸಾಕಷ್ಟು ಅವಕಾಶಗಳಿರುತ್ತವೆ. ಈ ಅವಧಿ ಗಾಯಾಳುಗಳ ಪಾಲಿಗೆ ಗೋಲ್ಡನ್ ಅವರ್ ಇದ್ದಂತೆ. ಇಂತಹ ಅವಧಿಯಲ್ಲಿ ಪೆÇಲೀಸ್ ಕೇಸ್, ಕಾನೂನು ಎಂಬ ನೆಪವೊಡ್ಡಿ ಗಾಯಾಳುಗಳ ರಕ್ಷಣೆಗೆ ಹೆದರಬಾರದು ಎಂಬ ಸಂದೇಶ ಸಾರಲಾಗುತ್ತಿದೆ.

ಇದಕ್ಕೆಂದೇ ಪ್ರತ್ಯೇಕ ಲೋಗೋ ತಯಾರಿಸಲಾಗಿದೆ. ಇಂತಹ ಲೋಗೋ ಹಾಗೂ ಘೋಷವಾಕ್ಯಗಳನ್ನು ಸಾರಿಗೆ ಬಸ್ ಸೇರಿ ನಾನಾ ವಾಹನಗಳಲ್ಲಿ ಭಿತ್ತಿಪತ್ರದಂತೆ ಅಂಟಿಸಿ ಜಾಗೃತಿ ಕೈಗೊಳ್ಳಲಾಗಿದೆ. ಮತ್ತೊಂದೆಡೆ 50ಸಾವಿರ ಕರಪತ್ರ, 10ಸಾವಿರ ಬ್ರೋಚರ್‍ಗಳ ಮೂಲಕ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೂ ಮಾಹಿತಿ ನೀಡಲಾಗುತ್ತಿದೆ.
ಅಪಘಾತ ಸಂಭವಿಸಿದಲ್ಲಿ ಹತ್ತಿರದ ಆಸ್ಪತ್ರೆಗೆ ಸಾಗಿಸಲು ಸಹಕರಿಸಿ ಜೀವ ಉಳಿಸುವಲ್ಲಿ ಭಾಗಿದಾರರಾಗಲು ಆಂಬ್ಯುಲೆನ್ಸ್‍ಗೆ ದಾರಿ ಬಿಡಬೇಕೆಂದು ಸಾರ್ವಜನಿಕರಿಗೆ ಆಂದೋಲನ ರೂಪದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಎಸ್‍ಐ ಮಹಮದ್ ರಫಿ ಅವರು ಹಮ್ಮಿಕೊಂಡಿರುವ ಜಾಗೃತಿಯು ರಾಜ್ಯಾದ್ಯಂತ ಜನಾಂದೋಲನವಾಗಿ ಪರಿಣಮಿಸಿದಲ್ಲದೆ ದೇಶದೆಲ್ಲೆಡೆ ಪ್ರಶಂಸೆಗೆ ಭಾಜನವಾಗಿದೆ. ಅಲ್ಲದೆ ವಿಶ್ವಸಂಸ್ಥೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿರುವುದು ಹೆಮ್ಮೆಯ ಸಂಗತಿ.

ಇದೀಗ ಜೀವರಕ್ಷಕರಿಗೆ ಕಾನೂನು ರಕ್ಷಣೆ ಒದಗಿಸಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ಕರ್ನಾಟಕ ಜೀವ ರಕ್ಷಕರು ಹಾಗೂ ವೈದ್ಯಕೀಯ ವೃತ್ತಿಪರರಿಗೆ (ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಕ್ಷಣೆ ಮತ್ತು ನಿಯಂತ್ರಣ) ಮಸೂದೆ 2016ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದರಿಂದ ಯಾವುದೇ ಅಪಘಾತಕ್ಕೀಡಾದ ವ್ಯಕ್ತಿಯನ್ನು ತಕ್ಷಣ ಚಿಕಿತ್ಸೆಗೆ ದಾಖಲಿಸುವವರಿಗಾಗಲಿ, ಚಿಕಿತ್ಸೆ ನೀಡುವವರಿಗಾಗಲಿ ಪೆÇಲೀಸ್ ತನಿಖೆಯ ಭಯವಿರುವುದಿಲ್ಲ.
ವೈದ್ಯಕೀಯ ನಿಘಂಟಿನಲ್ಲಿ ಗೋಲ್ಡನ್ ಅವರ್ ಎಂದರೆ ಅಪಘಾತವಾದ ಕೆಲವೇ ನಿಮಿಷಗಳಲ್ಲಿ ತುರ್ತು ಚಿಕಿತ್ಸೆ ನೀಡಬೇಕಾಗಿರುವ ಅವಧಿಯಾಗಿದೆ. ಈ ಹೊಸ ಮಸೂದೆ ಜಾರಿಯಿಂದ ಗೋಲ್ಡನ್ ಅವರ್ ನಲ್ಲಿ ಯಾವುದೇ ಜೀವರಕ್ಷಕರು, ವೈದ್ಯರು ಪೆÇಲೀಸರ ಕಿರುಕುಳ, ತನಿಖೆಯ ಭಯವಿಲ್ಲದೆ ತುರ್ತು ಚಿಕಿತ್ಸೆ ನೀಡಬಹುದು.

ಹೊಸ ಕಾನೂನಿನಡಿಯಲ್ಲಿ ಕರ್ನಾಟಕ ಸರ್ಕಾರ ಜೀವ ರಕ್ಷಕರಿಗೆ ಹಣದ ನೆರವನ್ನು ಒದಗಿಸಲಿದೆ.ಅಲ್ಲದೆ ನ್ಯಾಯಾಲಯ, ಪೆÇಲೀಸ್ ಠಾಣೆಗೆ ಅವರು ಹಾಜರಾಗುವುದರಿಂದ ವಿನಾಯಿತಿ ದೊರೆಯುತ್ತದೆ.ಇಷ್ಟಕ್ಕೂ ಅವರು ನ್ಯಾಯಾಲಯ ಅಥವಾ ಪೆÇಲೀಸ್ ಠಾಣೆಗೆ ಹಾಜರಾಗುವುದು ತೀರಾ ಅಗತ್ಯವಾಗಿದ್ದರೆ ಅಂತಹ ವೇಳೆ ಅವರ ಪ್ರಯಾಣ ಹಾಗೂ ಇತರೆ ವೆಚ್ಚಗಳನ್ನು ಜೀವ ರಕ್ಷಕರ ನಿಧಿಯ ಮೂಲಕ ಭರಿಸಲಾಗುವುದು.
ಅಪಘಾತಕ್ಕೀಡಾದವರನ್ನು ಯಾವುದೇ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ ಬಳಿಕ ಜೀವರಕ್ಕ್ಷಕರು ನಿರುಮ್ಮಳವಾಗಿ ಹಿಂದಿರುಗಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ.ಹೊಸ ಕಾನೂನಿನಂತೆ ಜೀವ ರಕ್ಷಕರಿಗೆ ಪೆÇಲೀಸರು, ಕಾನೂನಿನ ಹೆಸರಲ್ಲಿ ಯಾವ ಕಿರುಕುಳ ನೀಡುವಂತಿಲ್ಲ ಎನ್ನುವ ಸ್ಪಷ್ಟ ಸಂದೇಶವಿದೆ ಎಂದು ಅಧಿಕೃತ ಮಾಹಿತಿ ಹೇಳಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ