ಬೆಂಗಳೂರು, ಅ.1-ಜೆಸಿಬಿ ಚಾಲಕರಿಗೆ ಪ್ರತ್ಯೇಕ ಚಾಲನಾ ಪರವಾನಗಿ ಒದಗಿಸುವ ಜತೆಗೆ ಮಾಲೀಕರು ಹಾಗೂ ಚಾಲಕರ ಹಿತರಕ್ಷಣೆಗಾಗಿ ಸರ್ಕಾರ ನಿರ್ದಿಷ್ಟ ಕಾಯಿದೆ ರೂಪಿಸಬೇಕೆಂದು ನಗರ ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಜಿ.ನರಸಿಂಹಮೂರ್ತಿ ಒತ್ತಾಯಿಸಿದ್ದಾರೆ.
ಮಾಗಡಿ ಮುಖ್ಯರಸ್ತೆ ಮುದ್ದಯ್ಯನಪಾಳ್ಯದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಜೆಸಿಬಿ ಮಾಲೀಕರ ಸಂಘದ ಹಿತರಕ್ಷಣಾ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜೆಸಿಬಿ ಕಾರ್ಯಾಚರಣೆ ವೇಳೆ ನಿವೇಶನ, ಮನೆ, ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದ ವ್ಯಾಜ್ಯ ಮುಂದಿಟ್ಟುಕೊಂಡು ಚಾಲಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಸಾಲ ಸೋಲ ಮಾಡಿ ಖರೀದಿಸಿದ ಜೆಸಿಬಿಯನ್ನು ಜಖಂಗೊಳಿಸಲಾಗುತ್ತಿದೆ .
ಜತೆಗೆ ಚಾಲಕರು ಹಾಗೂ ಮಾಲೀಕರ ಮೇಲೆ ಪೆÇಲೀಸರು ವಿನಾಕಾರಣ ಪ್ರಕರಣ ದಾಖಲಿಸಿ ಜೆಸಿಬಿ ವಶಕ್ಕೆ ಪಡೆಯುತ್ತಿದ್ದು ಇತ್ತ ದುಡಿಮೆಯೂ ಇಲ್ಲ ಅತ್ತ ಮಾಲೀಕರು ಸುಖಾಸುಮ್ಮನೆ ಪೆÇಲೀಸ್ ಠಾಣೆ, ನ್ಯಾಯಾಯಲಗಳಿಗೆ ಅಲೆಯುವಂತಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಪೆÇಲೀಸರ ಕಿರುಕುಳ ತಪ್ಪಿಸಬೇಕೆಂದು ಆಗ್ರಹಿಸಿದರು.
ಒಂದೆಡೆ ಡೀಸೆಲï ದರ , ಆಯಿಲï ಮತ್ತು ಬಿಡಿಭಾಗಗಳ ಬೆಲೆ ಗಗನಮುಖಿಯಾಗುತ್ತಿದ್ದರೂ ಇನ್ನೊಂದೆಡೆ ಜೆಸಿಬಿ ಬಾಡಿಗೆದರ ಮಾತ್ರ ಹೆಚ್ಚಳವಾಗುತ್ತಿಲ್ಲ. ಪರಿಣಾಮ ಸಾಲದ ಕಂತು ಕಟ್ಟಲು ಮನೆಮಠ ಮಾರಿಕೊಂಡು ಮಾಲೀಕರು ಬೀದಿಗೆ ಬೀಳುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಸರ್ಕಾರಕ್ಕೆ ಪ್ರತಿಯೊಬ್ಬ ಜೆಸಿಬಿ ಮಾಲೀಕ ತೆರಿಗೆ ರೂಪದಲ್ಲಿ ಸುಮಾರು 1.75 ಲಕ್ಷ ರೂಪಾಯಿ ಪಾವತಿಸುತ್ತಿದ್ದಾನೆ. ನಾಗರೀಕರಿಗೆ ರಸ್ತೆ, ಸೇತುವೆ ನಿರ್ಮಾಣದಂತಹ ಅಭಿವೃದ್ಧಿ ಕಾರ್ಯಗಳಲ್ಲಿ ಜೆಸಿಬಿ ಕಾರ್ಯಾಚರಣೆ ಮಹತ್ವದ್ದಾಗಿದ್ದು, ಮಾಲೀಕರು ಹಾಗೂ ಚಾಲಕರ ಹಿತಕ್ಕಾಗಿ ಸರ್ಕಾರ ಕೂಡಲೇ ಮುಂದಾಗಬೇಕೆಂದು ಆಗ್ರಹಿಸಿದರು.
ಜೆಸಿಬಿ ಮಾಲೀಕ ಆನಂದ್ ಮಾತನಾಡಿ, ಜೆಸಿಬಿ ಕಾರ್ಯಾಚರಣೆಗೆ ಗಂಟೆಗೆ ಕನಿಷ್ಟ 800ರೂ ನಿಗದಿತ ದರವನ್ನು ಪಡೆಯಬೇಕು . ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಜೆಸಿಬಿಯಿಂದ ಕೆಲಸ ಮಾಡಿಸುವವರೊಂದಿಗೆ ವ್ಯವಹರಿಸಬೇಕೆಂದು ಕಿವಿಮಾತು ಹೇಳಿದರು.
ಕೊಡಿಗೇಹಳ್ಳಿ ಗ್ರಾ.ಪಂ. ಸದಸ್ಯ ರಾಜಣ್ಣ, ಜೆಸಿಬಿ ಮಾಲೀಕರಾದ ಆನಂದ್, ಮಂಜುನಾಥ್, ಗಣೇಶಪ್ಪ, ನಟೇಶ್, ಗಂಗಾಧರ್ ಗೌಡ ಮೊದಲಾದವರಿದ್ದರು.