ಬೆಂಗಳೂರು, ಅ.1-ಪ್ರತಿ ಕಂದಾಯ ವಿಭಾಗಕ್ಕೊಂದರಂತೆ ಸುಸಜ್ಜಿತ ವೃದ್ಧಾಶ್ರಮ ಸ್ಥಾಪಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಪ್ರತಿ ವೃದ್ಧಾಶ್ರಮದಲ್ಲೂ ಕೇರಳ ಮಾದರಿಯಲ್ಲಿ 10 ಹಾಸಿಗೆಗಳ ಶುಶ್ರೂಷ ಕೇಂದ್ರ ಸ್ಥಾಪನೆಗೆ ಅವಕಾಶ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಡಾ.ಜಯಮಾಲ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದರು.
ನಗರದ ರವೀಂದ್ರಕಲಾಕ್ಷೇತ್ರದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವ ನಾಡಿನಲ್ಲಿ ಹಿರಿಯ ನಾಗರಿಕರು ನೆಮ್ಮದಿಯಾಗಿ ಬದುಕು ನಡೆಸುತ್ತಾರೋ ಅಲ್ಲಿ ದೇವರು ನೆಲೆಸುತ್ತಾನೆ. ಹಿರಿಯ ನಾಗರಿಕರ ಕೊನೆಗಾಲದಲ್ಲಿ ಉತ್ತಮ ಜೀವನ ನಡೆಸಲು ಮಕ್ಕಳು ಸಹಕಾರ ನೀಡಬೇಕು, ಬೆಳೆಸಿ ಓದಿಸಿ ಒಳ್ಳೆಯ ಕೆಲಸ ಕೊಡಿಸಿ ನೆಮ್ಮದಿಯನ್ನು ಕಲ್ಪಿಸಿಕೊಟ್ಟ ತಂದೆ-ತಾಯಿಗಳನ್ನು ಮರೆತು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವ ಮಕ್ಕಳು ನಮ್ಮ ಕಣ್ಮುಂದಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಕೊನೆಯ ಕಾಲದಲ್ಲಿ ಮಕ್ಕಳನ್ನು ನೋಡಬೇಕು ಎಂದು ಬಹಳಷ್ಟು ಹಿರಿಯರು ಹಂಬಲಿಸಿರುವುದನ್ನು ನಾನು ನೋಡಿದ್ದೇನೆ ಎಂದು ಹೇಳಿದರು.
ಸಂಧ್ಯಾಸುರಕ್ಷ, ದೇವದಾಸಿ ಅವರ ಮಾಸಾಸನಗಳ ಬಗ್ಗೆ ಸಚಿವರು ಸಮಗ್ರ ವಿವರಣೆ ನೀಡಿದರು. ಇದೇ ವೇಳೆ ಸೇವಿ ಸಲ್ಲಿಸಿದ 9 ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.