ವಿಶ್ವಸಂಸ್ಥೆ: ಭಾರತದ ಮೇಲಿನ ಪಾಕಿಸ್ತಾನದ ಆರೋಪಗಳು ಮೂರ್ಖತನದ್ದು ಎಂದು ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.
ಪೆಶಾವರ ಶಾಲೆ ಮೇಲೆ 2014ರಲ್ಲಿ ದಾಳಿ ನಡೆಸಿದ ಉಗ್ರರಿಗೆ ಭಾರತ ಬೆಂಬಲ ನೀಡಿತ್ತು ಎನ್ನುವ ಪಾಕ್ ಆರೋಪಕ್ಕೆ ವಿಶ್ವ ಸಂಸ್ಥೆಯಲ್ಲಿ ಪ್ರತಿಕ್ರಿಯಿಸಿರುವ ಭಾರತದ ರಾಯಭಾರಿ ಈನಂ ಗಂಭೀರ್, ಪಾಕಿಸ್ತಾನ ಮೂರ್ಖತನದ ಆರೋಪ ಮಾಡಿದೆ. ಇದೊಂದು ಆಧಾರರಹಿತ ಹೇಳಿಕೆ ಎಂದು ತಿರುಗೇಟು ನೀಡಿದ್ದಾರೆ.
ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರು, ಪೆಶಾವರ ಶಾಲೆ ಮೇಲೆ ಉಗ್ರರು ನಡೆಸಿದ ದಾಳಿ ವಿಷಯ ಪ್ರಸ್ತಾಪಿಸಿ ಭಾರತದ ವಿರುದ್ಧ ಆರೋಪ ಮಾಡಿದ್ದರು.ಈ ಹಿನ್ನಲೆಯಲ್ಲಿ ಗಂಭೀರ್ ಪ್ರತಿಕ್ರಿಯಿಸಿದ್ದು, 2014ರಲ್ಲಿ ಶಾಲೆ ಮೇಲೆ ನಡೆದ ದಾಳಿಯಲ್ಲಿ ಮಕ್ಕಳು ಸಾವಿಗೀಡಾದಾಗ ಭಾರತದ ಜನತೆ ದುಃಖ ವ್ಯಕ್ತಪಡಿಸಿದ್ದರು. ಸಂಸತ್ತಿನ ಉಭಯ ಸದನಗಳು ಸಾವಿಗೀಡಾದವರಿಗೆ ಸಂತಾಪ ಸೂಚಿಸಿದ್ದವು. ಭಾರತದಲ್ಲಿನ ಎಲ್ಲ ಶಾಲೆಗಳು ಎರಡು ನಿಮಿಷ ಮೌನ ಆಚರಿಸಿದ್ದವು. ಆದರೆ, ಪಾಕಿಸ್ತಾನದ ವಿದೇಶಾಂಗ ಸಚಿವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರಾಗಿದ್ದಾರೆ ಎಂದಿದ್ದಾರೆ.
ವಿದೇಶಾಂಗ ಸಚಿವರ ಮಟ್ಟದ ಮಾತುಕತೆ ಬಗ್ಗೆ ಹೇಳಿಕೆ ನೀಡಿದ ಗಂಭೀರ್, ಪಾಕಿಸ್ತಾನ ಬೆಂಬಲಿತ ಉಗ್ರರಿಂದ ನಾಲ್ವರು ಭಾರತದ ಯೋಧರು ಹತರಾದ ಬಗ್ಗೆ ಪ್ರತಿಕ್ರಿಯಿಸಿದ್ದ ಖುರೇಷಿ ಅವರು, ಇದೊಂದು ಕ್ಷುಲಕ ಘಟನೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಇಂತಹ, ಘಟನೆಗಳ ಬಳಿಕ ಮಾತುಕತೆ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಇಮ್ರಾನ್ ಖಾನ್ ನೇತೃತ್ವದಲ್ಲಿ ಹೊಸ ಪಾಕಿಸ್ತಾನ ಉದಯಿಸುತ್ತಿದೆ ಎಂದು ಖುರೇಷಿ ನೀಡಿರುವ ಹೇಳಿಕೆಗೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಗಂಭೀರ್, ‘ಹೊಸ ಪಾಕಿಸ್ತಾನದ ಮುನ್ನೋಟದ ಅಂಶಗಳನ್ನು ಆಲಿಸಲು ಭಾರತದ ನಿಯೋಗ ಕುತೂಹಲದಿಂದ ಬಂದಿತ್ತು. ಆದರೆ, ಖುರೇಷಿ ಹೇಳಿಕೆಗಳನ್ನು ಆಲಿಸಿದಾಗ ಹೊಸದೇನೂ ಇರಲಿಲ್ಲ. ಹಳೆಯ ಮುಖವಾಡದಲ್ಲೇ ಹೊಸ ಪಾಕಿಸ್ತಾನವಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಗುಡುಗಿದ್ದಾರೆ.
ವಿಶ್ವಸಂಸ್ಥೆ ಘೋಷಿಸಿರುವ 132 ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿ ಪಟ್ಟಿ ಮಾಡಿರುವ 22 ಭಯೋತ್ಪಾದಕರಿಗೆ ಪಾಕಿಸ್ತಾನ ಆಶ್ರಯ ನೀಡಿದೆ. ಜತೆಗೆ, ಉಗ್ರ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಮುಕ್ತವಾಗಿ ಸಂಚರಿಸುತ್ತಿರುವ ವರದಿಯನ್ನು ಪಾಕಿಸ್ತಾನ ನಿರಾಕರಿಸುದಿಲ್ಲ ಎಂದರು. ಇಡೀ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಪಾಕಿಸ್ತಾನದ ಹೊಸ ಸರ್ಕಾರಕ್ಕೆ ಸ್ಪಷ್ಟವಾದ ಮಾತುಗಳಲ್ಲಿ ಹೇಳುತ್ತೇನೆ ಎಂದಿದ್ದಾರೆ.