ಬೆಂಗಳೂರು, ಅ.1- ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಇದೇ 10 ಅಥವಾ 12ರಂದು ನಡೆಯಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಗರದಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಕುರಿತು ಎಲ್ಲಾ ತಯಾರಿಗಳು ಹಾಗೂ ವಿವಿಧ ಹಂತದ ಚರ್ಚೆಗಳು ನಡೆಯುತ್ತಿವೆ. ಒಂದೇ ಕಂತಿನಲ್ಲಿ ಬಾಕಿ ಇರುವ ಸಂಪುಟದ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದರು.
ಸಂಪುಟದಲ್ಲಿ ಖಾಲಿ ಇರುವ ಕಾಂಗ್ರೆಸ್ ಪಾಲಿನ ಆರು, ಜೆಡಿಎಸ್ನ ಒಂದು ಸ್ಥಾನ ಸೇರಿದಂತೆ ಒಟ್ಟು ಏಳು ಸ್ಥಾನಗಳನ್ನು ಭರ್ತಿ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಹೈಕಮಾಂಡ್ ನಾಯಕರ ಜತೆ ಕಾಂಗ್ರೆಸ್ ಮುಖಂಡರು ಹಾಗೂ ನಾವು ಕೂಡ ಮಾತುಕತೆ ನಡೆಸಿದ್ದೇವೆ.
ಅ.10 ಅಥವಾ 12ರಂದು ಏಳು ಮಂದಿ ಹೊಸದಾಗಿ ಸಂಪುಟ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಸಚಿವ ಸಂಪುಟ ವಿಸ್ತರಣೆಗಿದ್ದ ಕಾರ್ಮೋಡದ ತೆರೆ ಸರಿದಂತಾಗುತ್ತದೆ. ಸಮನ್ವಯ ಸಮಿತಿ ತೀರ್ಮಾನದಂತೆ ಸೆಪ್ಟಂಬರ್ ಅಂತ್ಯದೊಳಗೆ ಸಂಪುಟ ವಿಸ್ತರಣೆ ಆಗಬೇಕಿತ್ತು. ಆದರೆ, ಸಿದ್ದರಾಮಯ್ಯನವರ ವಿದೇಶ ಪ್ರವಾಸ, ಬೆಳಗಾವಿ ಕಾಂಗ್ರೆಸ್ನಲ್ಲಿ ಉಂಟಾದ ಭಿನ್ನಮತ, ನಂತರ ಬಿಜೆಪಿ ಪಕ್ಷ ನಡೆಸಿದ ಆಪರೇಷನ್ ಕಮಲ ಎಲ್ಲವನ್ನು ನಿಯಂತ್ರಿಸುವಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹೈರಾಣಾಗಿದ್ದರು. ಇನ್ನೇನು ಎಲ್ಲವೂ ಮುಗಿಯಿತು ಎನ್ನುವಷ್ಟರಲ್ಲಿ ಹಲವು ಸಚಿವಾಕಾಂಕ್ಷಿಗಳು ರೆಸಾರ್ಟ್ ಯಾತ್ರೆಗೆ ಮುಂದಾಗಿದ್ದರು. ಈ ಎಲ್ಲರನ್ನು ಮನವೊಲಿಸಿ ವಾಪಸ್ ಕರೆತಂದು ಪರಿಸ್ಥಿತಿಯನ್ನು ತಹಬಂದಿಗೆ ತರಲಾಯಿತು.
ಈ ಸಂದರ್ಭದಲ್ಲಿ ಎದುರಾದ ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟು ಪ್ರದರ್ಶಿಸಿ ಮೂರು ಸ್ಥಾನಗಳನ್ನು ಮೈತ್ರಿ ಪಕ್ಷಗಳು ಪಡೆದಿದ್ದವು. ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ನಡೆಸಿದ ಆಪರೇಷನ್ ಕಮಲದ ಯತ್ನ ಕೂಡ ವಿಫಲವಾಯಿತು. ಮತ್ತೆ ಪಾಲಿಕೆಯಲ್ಲಿ ದೋಸ್ತಿ ಆಡಳಿತ ಪ್ರತಿಷ್ಠಾಪನೆಯಾಯಿತು.
ಈಗ ಎಲ್ಲವೂ ಬಗೆಹರಿದಿದೆ. ಭಿನ್ನಾಭಿಪ್ರಾಯ, ಬಂಡಾಯವನ್ನು ಹೈಕಮಾಂಡ್ ನಾಯಕರು ಶಮನಗೊಳಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮಾಡಲು ಕಾಲ ಕೂಡಿ ಬಂದಿದೆ. ಅ.10 ಅಥವಾ 12ರಂದು ಸಚಿವ ಸಂಪುಟ ವಿಸ್ತರಣೆ ಮತ್ತು 30 ಶಾಸಕರಿಗೆ ನಿಗಮ ಮಂಡಳಿಗಳ ನೇಮಕ ಮಾಡುವ ಉದ್ದೇಶ ಹೊಂದಲಾಗಿದೆ.
ಈ ಮೂಲಕ ಮುಂಬರುವ ವಿಧಾನಸಭೆ ಉಪಚುನಾವಣೆ ಮತ್ತು ಲೋಕಸಭೆ ಚುನಾವಣೆಗೆ ಪಕ್ಷವನ್ನು ಬಲಪಡಿಸಿಕೊಂಡು ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ ಎಂದರು.
ಖಾಲಿ ಇರುವ ಆರು ಸ್ಥಾನಗಳಿಗೆ ಕಾಂಗ್ರೆಸ್ನಲ್ಲಿ 25ಕ್ಕೂ ಹೆಚ್ಚು ಪ್ರಬಲ ಆಕಾಂಕ್ಷಿಗಳಿದ್ದಾರೆ. ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬ ಜಿಜ್ಞಾಸೆ ಉಂಟಾಗಿದೆ. ಈ ಸಂದರ್ಭದಲ್ಲಿ ಮತ್ತೊಂದು ಸುತ್ತಿನ ಭಿನ್ನಮತ, ಬಂಡಾಯ ಎದುರಾಗಬಹುದೆಂಬ ಆತಂಕ ನಾಯಕರಲ್ಲಿ ಕಾಡತೊಡಗಿದೆ.
ಹೀಗಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ರೀತಿಯ ಭಿನ್ನಮತಕ್ಕೆ ಆಸ್ಪದನೀಡದಂತೆ ಎಚ್ಚರಿಕೆಯ ಹೆಜ್ಜೆ ಇಡಲು ನಾಯಕರು ನಿರ್ಧರಿಸಿದ್ದಾರೆ.
ನಾಳೆ ನಾಗ್ಪುರದಲ್ಲಿ ನಡೆಯಲಿರುವ ಎಐಸಿಸಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ತೆರಳಲಿದ್ದಾರೆ. ನಂತರ ಅವರು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಕೂಡ ನಡೆಸಲಿದ್ದಾರೆ.