
ಹೈದರಾಬಾದ್: ಒಂದು ಹುಡುಗಿಗಾಗಿ ಯುವಕರಿಬ್ಬರು ಪರಸ್ಪರ ಬೆಂಕಿ ಹಚ್ಚಿಕೊಂಡು ಸಜೀವ ದಹನಗೊಂಡ ಘೋರ ಘಟನೆ ತೆಲಂಗಾಣದ ಜಗ್ತಿಯಾಲ್ ಪಟ್ಟಣದಲ್ಲಿ ನಡೆದಿದೆ.
ಮೃತ ಯುವಕರನ್ನು 16 ವರ್ಷದ ಮಹೇಂದರ್ ಹಾಗೂ ರವಿತೇಜ ಎಂದು ಗುರುತಿಸಲಾಗಿದ್ದು, ವಿದ್ಯಾರ್ಥಿಗಳಾಗಿದ್ದಾರೆ. ಮಿಷನರಿ ಶಾಲೆಯ ವಿದ್ಯಾರ್ಥಿಗಳಾಗಿದ್ದ ಈ ಇಬ್ಬರೂ ರಾತ್ರಿ ಮದ್ಯ ಸೇವನೆ ಮಾಡಿ ಈ ಕೃತ್ಯ ಮಾಡಿಕೊಂಡಿದ್ದಾರೆ.
ಇಬ್ಬರೂ ವಿದ್ಯಾರ್ಥಿಗಳು ತಮ್ಮದೇ ಶಾಲೆಯಲ್ಲಿ ಓದುತ್ತಿದ್ದ ಹುಡುಗಿಯನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಒಂದೇ ಹುಡುಗಿಗಾಗಿ ಆರಂಭವಾದ ಜಗಳ ಬಳಿಕ ಪರಸ್ಪರ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಮಹೇಂದರ್ ಎಂಬಾತ ಸ್ಥಳದಲ್ಲೇ ಸಾವಿಗೀಡಾದರೆ, ಬೆಂಕಿಯಲ್ಲಿ ಬೆಂದು ಗಂಭೀರವಾಗಿ ಗಾಯಗೊಂಡಿದ್ದ ರವಿ ತೇಜ ಎಂಬಾತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಇನ್ನು ಘಟನಾ ಸ್ಥಳದಲ್ಲಿ ಮತ್ತೊಬ್ಬ ಹುಡುಗನಿದ್ದ ಎಂದು ಮೃತರ ಕುಟುಂಬದವರು ಹೇಳಿಕೆ ನೀಡಿದ್ದಾರೆ. ತನಿಖಾಧಿಕಾರಿಗಳು ಘಟನಾ ಸ್ಥಳದಲ್ಲಿ ಬಿಯರ್ ಬಾಟಲ್ ಹಾಗೂ ಮೊಬೈಲ್ ಫೋನ್ಸ್ ಅನ್ನು ಪತ್ತೆ ಹಚ್ಚಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸಿದ್ದಾರೆ.