ಬೆಂಗಳೂರು: ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂದುಕೊಂಡಿದ್ದ ಕಾಂಗ್ರೆಸ್ ಹಿರಿಯ ನಾಯಕ ರೋಷನ್ ಬೇಗ್ ಪಕ್ಷದ ಮೇಲಿನ ಕೋಪಕ್ಕೆ ಧಾರ್ಮಿಕ ಲೇಪನ ಮಾಡಿ ಮೇಯರ್ ಚುನಾವಣೆಗೆ ಗೈರಾಗಿ ಈಗ ಎಲ್ಲಿಲ್ಲದ ಫಜೀತಿ ಎದುರಾಗಿದೆ.
ಮಾಜಿ ಸಚಿವ ರೋಷನ್ ಬೇಗ್ ಅವರು, ನನ್ನ ಬಿಟ್ಟು ಇವರೇನು ಮಾಡುತ್ತಾರೇ ಎಂದು ಆಪ್ತರ ಬಳಿ ಹೇಳುತ್ತಿದ್ದರು. ಆದ್ರೆ ಇದರಿಂದಾಗಿ ರಾಜಕೀಯ ಅಳಿವು ಉಳಿವಿನ ಪ್ರಶ್ನೆ ಉಂಟಾಗಿದೆ. ಮೇಯರ್ ಚುನಾವಣೆಗೆ ಬೇಕಂತಲೇ ಗೈರು ಹಾಜರಾಗಿದ್ದರಿಂದ ಪಕ್ಷದ ಹಿರಿಯರು ಎಂಬುದನ್ನು ನೋಡದೆ ಶೋಕಾಸ್ ನೋಟಿಸ್ ನೀಡಿದೆ. ಇದೀಗ ಪಕ್ಷದ ಕೆಂಗಣ್ಣಿಗೆ ಗುರಿಯಾಗಿ ಉತ್ತರಿಸಲೇಬೇಕಾದ ಅನಿವಾರ್ಯತೆ ಜೊತೆಗೆ ತನ್ನ ನಿಜ ಬಣ್ಣ ಬಯಲಾಗಿ ಮುಜುಗರ ಉಂಟಾಗಿದೆ.
ಉದ್ದೇಶ ಪೂರ್ವಕವಾಗಿಯೇ ಮೇಯರ್ ಚುನಾವಣೆ ಸಮಯದಲ್ಲೇ ಹಜ್ ಯಾತ್ರೆಗೆ ತೆರಳಿ ಪಕ್ಷಕ್ಕೆ ಸೆಡ್ಡು ಹೊಡೆದಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಅನುಮಾನವಾಗಿದ್ದು, ಇದಕ್ಕೆ ಪೂರಕವೆಂಬಂತೆ ಸಾಕಷ್ಟು ಘಟನೆಗಳು ಸಹ ಮೇಯರ್ ಚುನಾವಣೆಯ ಮುನ್ನವೂ ನಡೆದಿವೆ. ಸಚಿವ ಸಂಪುಟದ ಮೊದಲ ಹಂತದಲ್ಲಿ ನನ್ನಂತಹ ಹಿರಿಯ ಶಾಸಕನಿಗೆ ಅವಕಾಶ ಕೊಡಲಿಲ್ಲ ಎಂದು ಮುನಿಸಿಕೊಂಡು ಪಕ್ಷದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದರು. ಜೆಡಿಎಸ್ ನಿಂದ ವಲಸೆ ಬಂದ ಜಮೀರ್ ಅಹಮ್ಮದ್ ಖಾನ್ ಗೆ ಸಚಿವ ಸ್ಥಾನ ನೀಡಿ ಸಮುದಾಯದ ನಾಯಕ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಕೂಡ ಅಸಮಧಾನ ಹೊರಹಾಕಿದ್ದರು. ಇವೆರಡು ವಿಷಯದ ಬಗ್ಗೆ ಪಕ್ಷದ ನಾಯಕರು ಸ್ಪಂದಿಸದ ಕಾರಣ ನಾಯಕರ ವಿರುದ್ಧ ಮುನಿಸಿಕೊಂಡು ಸಂಪುಟದಲ್ಲಿ ಸ್ಥಾನ ಸಿಗದ ಅಸಮಧಾನಿತರ ಜೊತೆ ಗುರುತಿಸಿಕೊಂಡಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.
ಪಕ್ಷದ ನಾಯಕರು ಯಾವುದೇ ಖಚಿತ ಭರವಸೆ ನೀಡಲಿಲ್ಲ. ಇದರಿಂದ ಸಿಟ್ಟಾದ ರೋಶನ್ ಬೇಗ್ ಮೇಯರ್ ಚುನಾವಣೆಗೆ 5 ದಿನ ಬಾಕಿ ಇರುವಾಗ ಉಮ್ರಾಗೆ ಹೋಗಿದ್ದಾರೆ. ನನ್ನನ್ನ ಯಾರು ಲೆಕ್ಕಕ್ಕಿಟ್ಟಿಲ್ಲ. ನಾನು ಏನು ಅಂತ ತೋರಿಸುತ್ತೀನಿ ಅಂತ ಆಪ್ತರ ಬಳಿ ಹೇಳಿಕೊಂಡಿರುವುದು ಕಾಂಗ್ರೆಸ್ ನಾಯಕರ ಕಿವಿಗೆ ಬಿದ್ದಿದೆ. ಮೇಯರ್ ಚುನಾವಣೆಗೆ ಬರಲೇಬೇಕು ಎಂಬ ಪಕ್ಷದ ವರಿಷ್ಠರ ಸೂಚನೆ ಹೊರತಾಗಿಯು ರೋಷನ್ ಬೇಗ್ ವಾಪಾಸ್ ಬಂದಿಲ್ಲ. ಈಗ ಪಕ್ಷ ಕಾರಣ ಕೇಳಿ ನೋಟಿಸ್ ನೀಡಿದೆ. ಇದಕ್ಕೆ ಧಾರ್ಮಿಕ ಕಾರಣ ಹೇಳಿದ್ರೂ ನಂಬುವ ಸ್ಥಿತಿಯಲ್ಲಿ ಪಕ್ಷದ ನಾಯಕರು ಇಲ್ಲ. ಪಕ್ಷದ ವಿರುದ್ಧ ನನ್ನ ತಾಕತ್ ತೋರಿಸುತ್ತೇನೆ ಎಂದು ಹೊರಟ ರೋಷನ್ ಬೇಗ್, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲದೇ ಇತ್ತ ಮಿನಿಸ್ಟರ್ ಗಿರಿ ಅತ್ತ ಲೋಕಸಭಾ ಟಿಕೆಟ್ ಎರಡು ಆಸೆಗೂ ಸ್ವತಃ ತಾವೇ ಕಲ್ಲು ಹಾಕಿಕೊಂಡರು ಎಂಬ ಮಾತು ಕಾಂಗ್ರೆಸ್ ವಲಯದಲ್ಲೇ ಕೇಳಿ ಬರುತ್ತಿದೆ.