ಬೆಂಗಳೂರು,ಸೆ.30- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯವಾಗಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ವಿಧಾನಸೌಧದ ಮುಂಭಾಗ ವಿಂಟೇಜ್ ಕಾರು ರ್ಯಾಲಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಯಾವ ಕಾರಣಕ್ಕೆ ಯಾರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮನ್ನು ರಾಹು-ಕೇತುಗಳು ಒಂದಾಗಿ ಸೋಲಿಸಿದ್ದಾರೆ ಎಂಬ ಹೇಳಿಕೆ ಬಗ್ಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
ಕಳೆದ ಮೂರ್ನಾಲ್ಕು ತಿಂಗಳಿನಿಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಬಿಸಿ ತುಪ್ಪ ನೀಡಲಾಗುತ್ತಿದೆ. ತಾವು ಕಳೆದ ಮೂರು ತಿಂಗಳಿನಿಂದಲೂ ಬಿಸಿ ತುಪ್ಪದ ರುಚಿ ನೋಡಲು ಅವಕಾಶವನ್ನು ಮಾಧ್ಯಮಗಳೇ ಮಾಡಿಕೊಟ್ಟಿವೆ. ಈಗ ಮತ್ತೊಂದು ಬಿಸಿ ತುಪ್ಪ ವಿಚಾರವನ್ನು ಪ್ರಸ್ತಾಪಿಸುತ್ತಿದ್ದೀರಿ ಎಂದರು.