ಲೋಕಸಭೆ ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆಯೇ ಬಿಜೆಪಿ ಬಿರುಕು…?

ಬೆಂಗಳೂರು,ಸೆ.30-ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಿಕ್ಕಂತಹ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳದೆ ಲೊಕಸಭಾ ಚುನಾವಣೆ ಎದುರು ನೋಡುತ್ತಿರುವ ಬಿಜೆಪಿಗೆ ಇದೀಗ ಬೆಂಗಳೂರು ನಾಯಕತ್ವದಲ್ಲಿ ಕಾಣಿಸಿಕೊಂಡಿರುವ ಬಿರುಕು ಲೋಕಸಭೆ ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸುಳಿವು ನೀಡಿದೆ.

ಬೆಂಗಳೂರು ನಾಯಕತ್ವ ವಿಚಾರದಲ್ಲಿ ಇದೀಗ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ವಿರುದ್ಧ ಅಪಸ್ವರ ಕೇಳಿ ಬಂದಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ಇದರಿಂದಾಗಿ ಬಿಬಿಎಂಪಿ ಚುಕ್ಕಾಣಿ ಹಿಡಿಯುವ ಅವಕಾಶವಿದ್ದರೂ ಬಿಜೆಪಿ ಕೈಚಲ್ಲಿ ಇದೀಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನ ಪಡೆದ ದಿನದಿಂದಲೂ ಬಿಬಿಎಂಪಿ ಮೇಲೆ ಹಿಡಿತ ಸಾಧಿಸಿದ್ದ ಆರ್.ಅಶೋಕ್, 2010ರಲ್ಲಿ ಬಿಬಿಎಂಪಿ ಚುಕ್ಕಾಣಿ ಹಿಡಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, 2015ರಲ್ಲಿ ಅತಿದೊಡ್ಡ ಪಕ್ಷವಾದರೂ ಅಧಿಕಾರ ಹಿಡಿಯುವಲ್ಲಿ ವಿಫಲರಾಗಿದ್ದರು.

ಎಲ್ಲ ಸಾಧ್ಯತೆ ಇದ್ದರೂ ನಿರ್ಲಕ್ಷ್ಯದಿಂದ ಅಂದು ಅಧಿಕಾರದಿಂದ ದೂರ ಉಳಿಯಬೇಕಾಯಿತು. ಅಂದಿನಿಂದ ನಿಧಾನವಾಗಿ ಬಿಬಿಎಂಪಿಯಲ್ಲಿ ಅಶೋಕ್ ಪ್ರಭಾವ ಕಡಿಮೆಯಾಗುತ್ತಲೇ ಬಂದಿದ್ದು, ವಿಧಾನಸಭಾ ಚುನಾವಣೆಯಲ್ಲಿಯೂ ಅದು ಸ್ಪಷ್ಟವಾಗುತ್ತಿದ್ದಂತೆ ಅಶೋಕ್ ವಿರುದ್ಧ ಅಸಮಾಧಾನ ಮೂಡಿತ್ತು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಕ್ಷೇತ್ರದಲ್ಲೂ ಬಿಜೆಪಿ ಸೋತಿದೆ. ಚುನಾವಣಾ ನಾಯಕತ್ವ ವಹಿಸಿದ್ದ ಅಶೋಕ್ ಅವರ ಹೊಂದಾಣಿಕೆ ರಾಜಕಾರಣವೇ ಇದಕ್ಕೆ ಕಾರಣ ಎಂದು ಸದಾನಂದಗೌಡ ಪಕ್ಷದ ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದು, ಅಶೋಕ್ ವಿರುದ್ಧ ತಿರುಗಿಬಿದ್ದಿದ್ದಾರೆ.
ಇದರಿಂದಾಗಿಯೇ ಬಿಬಿಎಂಪಿ ಮೇಯರ್ ಆಯ್ಕೆಯ ವೇಳೆ ಮತದಾನ ಬಹಿಷ್ಕರಿಸಿ ಹೊರ ನಡೆಯುವ ಮೂಲಕ ಅಧಿಕಾರ ಪಡೆಯುವ ಅವಕಾಶವಿದ್ದರೂ ಕೈಚಲ್ಲಿ ಕುಳಿತುಕೊಳ್ಳುವಂತಾಗಿದೆ. ಅಶೋಕ್ ಮೇಲಿನ ಮುನಿಸಿನಿಂದಾಗಿಯೇ ಸದಾನಂದಗೌಡ ಈ ನಡೆ ಅನುಸರಿಸಿ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಅಶೋಕ್‍ರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದ್ದಾರೆ ಎನ್ನಲಾಗಿದೆ.

ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಸದಾನಂದಗೌಡ ವಿರುದ್ಧವೇ ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿಕಾರ ಪಡೆಯುವ ಸನಿಹದಲ್ಲಿ ವಾಕ್ ಔಟ್ ಮಾಡುವ ಮೂಲಕ ಪಕ್ಷವನ್ನು ಅಧಿಕಾರದಿಂದ ದೂರ ಉಳಿಯುವಂತೆ ಮಾಡಿದರು. ಆದರೆ, ಇದಕ್ಕೆಲ್ಲಾ ನಾನೇ ಕಾರಣ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ನಡುವೆ ಬಿಬಿಎಂಪಿ ಅಧಿಕಾರ ಪಡೆಯುವ ಅವಕಾಶ ಕೈಚೆಲ್ಲಿದ ಕುರಿತಾಗಿ ಹೈಕಮಾಂಡ್ ವರದಿ ಕೇಳಿದೆ. ಸವಿಸ್ತಾರವಾದ ವರದಿಯನ್ನು ಸಿದ್ಧಪಡಿಸಿ ಯಡಿಯೂರಪ್ಪನವರಿಗೆ ಸಲ್ಲಿಸಿದ್ದು, ಪಕ್ಷದ ಉಸ್ತುವಾರಿ ಮೂಲಕ ದೆಹಲಿಗೆ ವರದಿ ರವಾನಿಸಲಾಗುತ್ತದೆ.
ವರದಿಯಲ್ಲಿ ಸದಾನಂದಗೌಡರ ಬಗ್ಗೆ ವಿಶೇಷ ಉಲ್ಲೇಖ ಇರಲಿದ್ದು, ಬೆಂಗಳೂರಿನಲ್ಲಿ ಹಿಡಿತ ಕಳೆದುಕೊಂಡಿಲ್ಲ ಎನ್ನುವುದನ್ನು ಪುಷ್ಟೀಕರಿಸುವ ರೀತಿ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಬೆಂಗಳೂರಿನಲ್ಲಿ ಬಿಜೆಪಿ ಮಟ್ಟಿಗೆ ಅಶೋಕ್ ನಾಯಕರಾಗಿದ್ದಾರೆ. ನಾಯಕತ್ವ ವಹಿಸಿಕೊಳ್ಳುವ ಮತ್ತೊಬ್ಬ ಲೀಡರ್ ಸದ್ಯ ಇಲ್ಲ. ಎಸ್.ಆರ್.ವಿಶ್ವನಾಥ್, ಪಿ.ಸಿ.ಮೋಹನ್ ಹೆಸರು ಕೇಳಿ ಬಂದರೂ ಅವರೆಲ್ಲಾ ಅಶೋಕ್‍ಗೆ ಪರ್ಯಾಯ ಆಗಲು ಸಾಧ್ಯವಿಲ್ಲ. ಅವರೆಲ್ಲಾ ಅವರ ಕ್ಷೇತ್ರಕ್ಕೆ ಸೀಮಿತ.
ಅಲ್ಲದೇ ಒಕ್ಕಲಿಗರ ಪ್ರಾಬಲ್ಯ ಇರುವ ಬೆಂಗಳೂರಿನಲ್ಲಿ ಒಕ್ಕಲಿಗರ ಸಮುದಾಯದ ವ್ಯಕ್ತಿಯೇ ನಾಯಕ. ಆದರೆ ಅಶೋಕ್‍ಗೆ ಪರ್ಯಾಯ ಹುಡುಕಾಟ ಬಿಜೆಪಿಗೆ ಕಷ್ಟವಾಗಿದೆ.

ಸದಾನಂದಗೌಡ ನೇರವಾಗಿಯೇ ಅಶೋಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರೆ, ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ ಕೂಡ ತಮ್ಮನ್ನು ಯಾವುದಕ್ಕೂ ಪರಿಗಣಿಸದೇ ಅಶೋಕ್ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎನ್ನುವ ಅಸಮಾಧಾನವನ್ನು ಹೊರಹಾಕಿದ್ದಾರೆ.
ಅಶೋಕ್ ವಿರುದ್ಧ ಅಸಮಾಧಾನ, ಪರ್ಯಾಯ ನಾಯಕತ್ವದ ಕೊರತೆ ಲೋಕಸಭಾ ಚುನಾವಣಾ ವೇಳೆ ಬಿಜೆಪಿಗೆ ಹೊಸ ಸಂಕಷ್ಟ ತಂದೊಡ್ಡಿದೆ.
ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಸಂಸದರಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಅನಂತ್ ಕುಮಾರ್, ಉತ್ತರದಲ್ಲಿ ಸದಾನಂದಗೌಡ, ಕೇಂದ್ರದಲ್ಲಿ ಪಿ.ಸಿ.ಮೋಹನ್ ಇದ್ದಾರೆ. ಆದರೆ, ಈಗಾಗಲೇ ಉತ್ತರದಲ್ಲಿ ಬಿಜೆಪಿ ಬಲ ಕಳೆದುಕೊಂಡಿರುವುದು ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟವಾಗಿದೆ.
ಅನಂತ್ ಕುಮಾರ್ ಅನಾರೋಗ್ಯ ದಕ್ಷಿಣದಲ್ಲಿ ಬಿಜೆಪಿ ಮೇಲೆ ಪ್ರಭಾವ ಬೀರಲಿದೆ. ಕೇಂದ್ರದಲ್ಲೂ ವರ್ಚಸ್ಸು ಇಳಿಮುಖವಾಗಿದೆ. ಇವುಗಳ ನಡುವೆ ಪಕ್ಷದ ನಾಯಕತ್ವದಲ್ಲೇ ಅಪಸ್ವರ ಎದ್ದಿರುವುದರಿಂದ ಮೂರು ಸ್ಥಾನಗಳನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ