ಬೆಂಗಳೂರು,ಸೆ.30- ಅಯೋಧ್ಯೆ ರಾಮಮಂದಿರ ವಿವಾದದಿಂದ ಹೆಸರು ಗಳಿಸಿತೇ ಹೊರತು ಆ ನಗರ ಅಭಿವೃದ್ಧಿಯಾಗಲಿಲ್ಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಗರದ ಎಂ.ಜಿ.ರಸ್ತೆಯ ಮೆಟ್ರೋ ಕೇಂದ್ರದಲ್ಲಿ ಅಯೋಧ್ಯೆಯ ಈಗಿನ ಪರಿಸ್ಥಿತಿ ಕುರಿತು ಛಾಯಾಗ್ರಾಹಕ ಸುಧೀರ್ ಶೆಟ್ಟಿ ಅವರು ಆಯೋಜಿಸಿದ್ದ ಚಿತ್ರಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಯೋಧ್ಯೆ ವಿವಾದಕ್ಕೊಳಗಾಗಿದ್ದರಿಂದ ಅಭಿವೃದ್ಧಿಯಿಂದ ದೂರ ಉಳಿದಿದೆ. ಅಂದಿನ ಜನರು ಸೌಹಾರ್ದತೆಯಿಂದ ಒಟ್ಟಿಗೆ ಇದ್ದರೂ ಹೊರಗಿನವರು ಅಲ್ಲಿನ ಪರಿಸ್ಥಿತಿಯನ್ನು ಹದಗೆಡಿಸಿದ್ದಾರೆ. ಹೀಗಾಗಿ ಅಯೋಧ್ಯೆ ನಗರ ವಿವಾದ ಸ್ಥಳವಾಗಿ ಕಾಣಿಸುತ್ತದೆ ಎಂದರು.
ಬಿಜೆಪಿ ಮತ್ತು ಆರ್ಎಸ್ಎಸ್ ರಾಮಮಂದಿರ ಹೆಸರಿನಲ್ಲಿ ವಿವಾದ ಉಂಟು ಮಾಡಿದರೆ ಹೊರತು ಅಭಿವೃದ್ದಿಪಡಿಸಲು ಮುಂದಾಗಲಿಲ್ಲ. ಈಗಲೂ ಕೂಡ ರಾಜಕೀಯ ಲಾಭ ಪಡೆಯಲು ಯತ್ನಿಸಲಾಗುತ್ತಿದೆಯೇ ಹೊರತು ಅಭಿವೃದ್ದಿಗೆ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.
ಹಿಂದು ಮುಸ್ಲಿಂ ಸೌಹಾರ್ದಯುತವಾಗಿ ಇರಲು ಸರ್ಕಾರ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಅಯೋಧ್ಯೆಯ ಜನ ಸಂಕಷ್ಟದಲ್ಲಿ ಬದುಕಬೇಕಾಗುತ್ತದೆ ಎಂದರು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಮಾತನಾಡಿ, ಅಯೋಧ್ಯೆ ಜನರಲ್ಲಿ ವೈಷಮ್ಯವಿಲ್ಲ. ಜನರು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸ್ಥಳೀಯರಿಗೆ ಬಿಟ್ಟುಕೊಡುವುದು ಒಳ್ಳೆಯದು. ಇತ್ತೀಚೆಗೆ ಅಯೋಧ್ಯೆ ವಿವಾದ ಕುರಿತ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದ್ದರೂ ಅದರಿಂದ ಸಮಸ್ಯೆ ಪೂರ್ಣವಾಗಿ ಬಗೆಹರಿಯುವುದಿಲ್ಲ. ಜನರು ಒಟ್ಟಿಗೆ ಹೋದಾಗ ಮಾತ್ರ ಸೌಹಾರ್ದತೆ ಕಾಪಾಡಲು ಸಾದ್ಯ ಎಂದು ಅಭಿಪ್ರಾಯಪಟ್ಟರು.
ಪರಿಸರವಾದಿ ಸುರೇಶ್ ಹೆಬ್ಳಿಕರ್, ಸಯದ್ ಸಫೀವುಲ್ಲಾ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.