ಬೆಂಗಳೂರು, ಸೆ.30- ಪದ್ಮನಾಭ ನಗರ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಹಮ್ಮಿಕೊಂಡಿದ್ದ ಲೋಕಸಂಪರ್ಕ ಅಭಿಯಾನದಲ್ಲಿ ಮಾಜಿ ಸಂಸದ ಎಂ.ಶ್ರೀನಿವಾಸ್ ಅವರಿಗೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿ ಅವರ ಬೆಂಬಲಿಗರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಕುರ್ಚಿ ಮೇಜುಗಳನ್ನು ಹೊಡೆದು ಪುಡಿಮಾಡಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಮುಖಂಡ, ಮಾಜಿ ಮೇಯರ್ ವೆಂಕಟೇಶ್ ಹಾಗೂ ಎಂ.ಶ್ರೀನಿವಾಸ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಕಾರ್ಯಕ್ರಮ ನಡೆಯದಂತೆ ಹಲವರು ಅಡ್ಡಿಪಡಿಸುವ ಪ್ರಯತ್ನ ನಡೆಸಿದ್ದಾರೆ.
ಲೋಕಸಂಪರ್ಕ ಅಭಿಯಾನಕ್ಕೆ ಏರ್ಪಡಿಸಿದ್ದ ಸಭೆ ಗದ್ದಲ, ಗಲಾಟೆ ಹಿನ್ನೆಲೆಯಲ್ಲಿ ನಾಯಕರು ಸಭೆಯನ್ನು ಬರ್ಖಾಸ್ತು ಮಾಡಿದ್ದಾರೆ. ಶ್ರೀನಿವಾಸ್, ಗುರಪ್ಪ ನಾಯ್ಡು ಇನ್ನಿತರ ಕಾಂಗ್ರೆಸ್ ಮುಖಂಡರ ಪರ-ವಿರುದ್ಧದ ಘೋಷಣೆಗಳು ಸಭೆಯಲ್ಲಿ ಕೇಳಿಬಂದವು.
ವಲಸಿಗ ಕಾಂಗ್ರೆಸ್ಸಿಗರಿಗೆ ಪಕ್ಷ ಮನ್ನಣೆ ನೀಡುತ್ತಿದೆ. ಇದರಿಂದ ಪಕ್ಷದ ವರ್ಚಸ್ಸು ಹಾಳಾಗಿದೆ. ಮೂಲ ಕಾಂಗ್ರೆಸ್ಸಿಗರಿಗೆ ಅನ್ಯಾಯವಾಗುತ್ತಿದೆ. ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದು ಹಲವರು ಆಗ್ರಹಿಸಿದರು.
ಸಭೆಗೆ ಬರದಂತೆ ಹಲವರು ತಡೆದರು, ಮತ್ತೆ ಹಲವರು ಪರ ವಿರೋಧದ ಘೋಷಣೆಗಳನ್ನು ಕೂಗಲಾರಂಭಿಸಿದರು. ರೊಚ್ಚಿಗೆದ್ದ ಕಾರ್ಯಕರ್ತರು ಕುರ್ಚಿಗಳನ್ನು ಎತ್ತಿ ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.