
ಬೆಂಗಳೂರು, ಸೆ.30- ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಿಬಿಎಂಪಿ ಚುನಾವಣೆ ವೈಫಲ್ಯದ ಬಗ್ಗೆ ತಮ್ಮ ಅಸಮಾಧಾನವನ್ನು ಫೇಸ್ಬುಕ್ ಸ್ಟೇಟಸ್ ಮೂಲಕ ಪರೋಕ್ಷವಾಗಿ ಹೊರಹಾಕಿದ್ದಾರೆ.
ತಂಡಸ್ಫೂರ್ತಿ ಇಲ್ಲದವರು ಗೆಲುವು ಸಾಧಿಸುವುದು ಅಸಾಧ್ಯ ಎಂದು ಹೇಳುವ ಮೂಲಕ ಆರ್.ಅಶೋಕ್ ಅವರ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅನಗತ್ಯವಾಗಿ ಅಶೋಕ್ ಅವರನ್ನು ಟೀಕೆ ಮಾಡುವುದು ಬೇಡ. ನಮಗೆ ಹಿನ್ನಡೆಯಾಗಿದೆ ಎಂದು ಅಶೋಕ್ ಅವರ ವಿರುದ್ಧ ದೂರುವುದು ಸರಿಯಲ್ಲ ಎಂದು ಅಶೋಕ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಅಶೋಕ್ ಅವರು ಅಧಿಕಾರ ಹಿಡಿಯಲು ಉತ್ತಮ ಪ್ರಯತ್ನ ಮಾಡಿದ್ದಾರೆ. ಆದರೆ, ಹಿನ್ನಡೆಯಾಗಿದೆ. ಹಾಗೆಂದು ಅವರನ್ನು ದೂರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಬಿಜೆಪಿಯಲ್ಲಿನ ತಣ್ಣನೆಯ ಬಂಡಾಯ ಈ ಮೂಲಕ ಹೊತ್ತಿಕೊಳ್ಳತೊಡಗಿದೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 104 ಸ್ಥಾನಗಳನ್ನು ಗೆದ್ದರೂ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಬಿಬಿಎಂಪಿಯಲ್ಲಿ ನೂರು ಸ್ಥಾನಗಳನ್ನು ಗೆದ್ದರೂ ಅಧಿಕಾರಕ್ಕೆ ಬರಲಾಗಲಿಲ್ಲ. ವಿಧಾನ ಪರಿಷತ್ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಪ್ಲಾನ್ ಫೇಲಾಯಿತು.
ಬಿಬಿಎಂಪಿಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಹೀಗಾಗಿ ಅಶೋಕ್ ಅವರ ಮೇಲೆ ಅಸಮಾಧಾನದ ಹೊಗೆ ಏಳುತ್ತಿದೆ. ಸಂತೋಷ್ ಅವರು ಪರೋಕ್ಷವಾಗಿ ದಾಳಿ ನಡೆಸಿದ್ದಾರೆ. ಅಶೋಕ್ ಪರ ಬಿಎಸ್ವೈ ನಿಂತಿದ್ದಾರೆ. ಒಂದು ರೀತಿಯ ಶೀತಲ ಸಮರ ಶುರುವಾದಂತಾಗಿದೆ.