ಜಕಾರ್ತ: ಇಂಡೊನೇಷ್ಯಾದಲ್ಲಿ ಸಂಭವಿಸುರ ಪ್ರಭಲ ಭೂಕಂಪ ಹಾಗೂ ಸುನಾಮಿ ಅಬ್ಬರಕ್ಕೆ ಸಾವನ್ನಪ್ಪಿರುವವರ ಸಂಖ್ಯೆ 832ಕ್ಕೆ ಏರಿಕೆಯಾಗಿದೆ.
ಕಳೆದ ಶುಕ್ರವಾರ ಇಂಡೊನೇಷ್ಯಾದ ಸುಲಾವೇಸಿ ದ್ವೀಪದ ಪಲು ನಗರದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಭೀಕರ ಸುನಾಮಿ ಅಲೆಗಳು ಆರಂಭವಾಗಿದ್ದು, ಬೃಹತ್ ಕಟ್ಟದಗಳು, ಮನೆಗಳು ಸಂಪೂರ್ಣ ನಾಮಾವಶೇಷವಾಗಿವೆ. ಅವಶೇಷಗಳಡಿಯಲ್ಲಿ ಸಿಕ್ಕ ಶವಗಳ ಸಂಖ್ಯೆ 832ಕ್ಕೆ ಏರಿಕೆಯಾಗಿದೆ.
ಸುನಾಮಿ ಬಳಿಕ ಪಲು ನಗರದಿಂದ ನೂರಾರು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಲಾವೇಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 7.5ರಷ್ಟು ತೀವ್ರತೆ ದಾಖಲಾಗಿದ್ದು, ಗರಿಷ್ಠ 1.5 ಮೀಟರ್ ಎತ್ತರದಷ್ಟು ಸುನಾಮಿ ಅಲೆಗಳು ಎದ್ದಿದ್ದವು. ಬೀಚ್ ನಲ್ಲಿ ಸ್ಥಳೀಯ ಹಬ್ಬವೊಂದು ಇದ್ದಿದ್ದರಿಂದ ಸಾವಿರಾರು ಮಂದಿ ಬೀಚ್ ಬಳಿ ನೆರೆದಿದ್ದರು. ಈ ವೇಳೆ ಸುನಾಮಿ ಸಂಭವಿಸಿದ್ದರಿಂದ ಸಾವಿನ ಸಂಖ್ಯೆ ಜತೆಗೆ ನಾಪತ್ತೆಯಾಗಿರುವವರ ಸಂಖ್ಯೆಯೂ ಹೆಚ್ಚಿದೆ.