ಬೆಂಗಳೂರು, ಸೆ.29-ಅಕ್ಟೋಬರ್ ಮೊದಲ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ನೀಡುತ್ತಿದ್ದಂತೆ ಸಚಿವಾಕಾಂಕ್ಷಿಗಳ ಲಾಬಿ ಜೋರಾಗಿದೆ.
ಸಂಪುಟದಲ್ಲಿ ಖಾಲಿ ಇರುವ (ಕಾಂಗ್ರೆಸ್ ಪಾಲಿನ) 6 ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಅಕ್ಟೋಬರ್ 10 ರೊಳಗೆ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳ ನೇಮಕ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಅವರು ತಿಳಿಸಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ದೆಹಲಿಗೆ ದೌಡಾಯಿಸಿದ್ದಾರೆ.
ಆಷಾಢ ಮಾಸದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಮುಂದೂಡಿಕೆಯಾಗಿತ್ತು. ನಂತರ ಬೆಳಗಾವಿಯ ಭಿನ್ನಮತ ಉಲ್ಬಣಗೊಂಡು ಅದನ್ನು ಬಗೆಹರಿಸುವಲ್ಲಿಯೇ ಹೈಕಮಾಂಡ್ ಹೈರಾಣಾಗಿ ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿತ್ತು.
ವಿಧಾನಪರಿಷತ್ ಉಪಚುನಾವಣೆ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿತ್ತು. ಪ್ರಸ್ತುತ ಈಗ ಕಾಂಗ್ರೆಸ್ನಲ್ಲಿ ಬಂಡಾಯ ಶಮನಗೊಂಡಿದ್ದು, ವಿಧಾನಪರಿಷತ್ ಉಪಚುನಾವಣೆ ಸುಸೂತ್ರವಾಗಿ ಮುಗಿದಿದೆ. ಅಲ್ಲದೆ, ಬಿಬಿಎಂಪಿ ಮೇಯರ್ ಚುನಾವಣೆಯೂ ಅಂದುಕೊಂಡಂತೆ ನಡೆದಿದೆ. ಹಾಗಾಗಿ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳ ನೇಮಕಕ್ಕೆ ಕಾಲ ಕೂಡಿ ಬಂದಿದೆ.
ನಿನ್ನೆಯಷ್ಟೆ ಬಾದಾಮಿಯಲ್ಲಿ ಮಾತನಾಡಿದ ಸಿದ್ದರಾಮಯ್ಯನವರು, ಅಕ್ಟೋಬರ್ 3 ರಂದು ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಸಚಿವಾಕಾಂಕ್ಷಿಗಳಲ್ಲಿ ಉತ್ಸಾಹ ಮೂಡಿದ್ದು, ಹಲವು ಶಾಸಕರು ದೆಹಲಿಯತ್ತ ದೌಡಾಯಿಸಿದ್ದಾರೆ.
ಎಂ.ಬಿ.ಪಾಟೀಲ್, ನಾಗೇಂದ್ರ, ಸಿ.ಎಸ್.ಶಿವಳ್ಳಿ, ತುಕಾರಾಮ್, ರಾಮಲಿಂಗಾರೆಡ್ಡಿ, ಎಂ.ಕೃಷ್ಣಪ್ಪ, ಎಚ್.ಕೆ.ಪಾಟೀಲ್, ಬಿ.ಸಿ.ಪಾಟೀಲ್, ಸುಧಾಕರ್, ನಾಗೇಶ್ ಸೇರಿದಂತೆ 20ಕ್ಕೂ ಹೆಚ್ಚು ಸಚಿವಾಕಾಂಕ್ಷಿಗಳಿದ್ದಾರೆ. ಖಾಲಿ ಇರುವ ಆರು ಸ್ಥಾನಗಳನ್ನು
ಭರ್ತಿ ಮಾಡಬೇಕಿದೆ. ಯಾರಿಗೆ ಸ್ಥಾನ ದೊರೆಯಲಿದೆ ಎಂಬುದನ್ನು ಕಾದು ನೋಡಬೇಕು. ಇದಲ್ಲದೆ, 30 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದ್ದು, 20 ಕಾಂಗ್ರೆಸ್ ಹಾಗೂ 10 ಜೆಡಿಎಸ್ ಶಾಸಕರಿಗೆ ಸ್ಥಾನ ಲಭಿಸಲಿದೆ. ಪ್ರಮುಖ ನಿಗಮ ಮಂಡಳಿಗಳಿಗೆ ನೇಮಕ ಮಾಡುವ ಮೂಲಕ ಸದ್ಯದ ಅಸಮಾಧಾನವನ್ನು ಬಗೆಹರಿಸಿ ಲೋಕಸಭೆ ಚುನಾವಣೆಗೆ ದೋಸ್ತಿ ಪಕ್ಷ ಸಜ್ಜಾಗಲು ತಯಾರಿ ನಡೆಸಿದೆ.
ಅಂದುಕೊಂಡಂತೆ ಆದರೆ ಅ.10ರೊಳಗೆ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ ಆಗಲಿದೆ.