ಬೆಂಗಳೂರು, ಸೆ.29- ಹೈನುಗಾರಿಕೆ ಮತ್ತು ಆಹಾರ ಸಂಸ್ಕರಣ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ತಂತ್ರಜ್ಞಾನ ಗ್ರೂಪ್ ಆದ ಜಿಇಎ ಭಾರತದಲ್ಲೇ ಅತಿದೊಡ್ಡ ಸ್ವಯಂಚಾಲಿತ ಮೊಜಾರೆಲ್ಲಾ ಚೀಸ್ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದೆ.
ಗ್ರಾಹಕನಾದ ಮಿಲ್ಕಿ ಮಿಸ್ಟ್ ಡೈರಿ ಫುಡ್ಸ್ ಪ್ರೈವೇಟ್ ಲಿಮಿಟೆಡ್, ದಕ್ಷಿಣ ಭಾರತದಲ್ಲಿ ಮುಂಚೂಣಿಯಲ್ಲಿರುವ ಖಾಸಗಿ ಹೈನುಗಾರಿಕೆ ಸಂಸ್ಥೆಗಳಲ್ಲಿ ಒಂದಾಗಿದೆ. ತಮಿಳುನಾಡಿನ ಈರೋಡಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಿಲ್ಕಿ ಮಿಸ್ಟ್ ಚೀಸ್, ಪನ್ನೀರ್, ಯೋಗರ್ಟ್, ಸ್ವಾದಭರಿತ ಯೋಗರ್ಟ್ ಮತ್ತು ಮೊಸರು ಒಳಗೊಂಡಂತೆ ವೈವಿಧ್ಯಮಯ ಮೌಲ್ಯವರ್ಧಿತ ಹಾಲಿನ ಉತ್ಪನ್ನಗಳನ್ನು ತಯಾರಿಸುತ್ತದೆ. ಇದು, ಭಾರತದಲ್ಲಿ ಜಿಇಎ ಪಡೆದಿರುವ ಸತತ ಎರಡನೇ ಆರ್ಡರ್ ಆಗಿದೆ. ಮೊದಲನೆಯದು, ಪ್ರತಿದಿನ 0.6 ದಶಲಕ್ಷ ಲೀಟರ್ ಹಾಲಿನ ಸಂಸ್ಕರಣಕ್ಕೆ ಸಂಪೂರ್ಣ ಹಸಿರುಕ್ಷೇತ್ರ ಯೋಜನೆ ಮತ್ತು ಪ್ರತಿದಿನ 40 ಟನ್ ವ್ಹೇ ಪೌಡರ್ ಘಟಕವಾಗಿದ್ದು ಇವೆರಡನ್ನೂ ಜಿಇಎ ಯಶಸ್ವಿಯಾಗಿ ಪೂರೈಸಿದೆ ಎಂದು ಮಿಲ್ಕಿ ಮಿಸ್ಟ್ನ ನಿರ್ವಾಹಕ ನಿರ್ದೇಶಕರಾದ ಸತೀಶ್ ಕುಮಾರ್ ತಿಳಿಸಿದ್ದಾರೆ.
ಜಿಇಎ ನಮಗಾಗಿ ಈಗಾಗಲೇ ಮತ್ತೊಂದು ಯೋಜನೆಯನ್ನು ನೆರವೇರಿಸಿದೆ . ಮೊಜಾರೆಲ್ಲಾ ಚೀಸ್ ನಂತರ ವಿಶೇಷ ಉತ್ಪನ್ನಕ್ಕೆ ಅವರ ಆವಿಷ್ಕಾರೀ ದೃಷ್ಟಿಕೋನವನ್ನು ನಾವು ಮೆಚ್ಚಿಕೊಂಡಿದ್ದೇವೆ. ನಮ್ಮ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ನಾವು ಇಚ್ಛಿಸುತ್ತಿರುವುದರಿಂದ, ಕೇವಲ ಉತ್ಕೃಷ್ಟ ಗುಣಮಟ್ಟದ ಮತ್ತು ಶುಚಿತ್ವ ಮಾನದಂಡಗಳನ್ನು ಮಾತ್ರ ಖಾತ್ರಿಪಡಿಸುವುದಲ್ಲದೆ, ಪಾರಿಸರಿಕ ನಿರಂತರತೆಯನ್ನು ನಿರ್ವಹಿಸುವ ತಂತ್ರಜ್ಞಾನಗಳನ್ನು ನಾವು ಅಳವಡಿಸಿಕೊಳ್ಳಬೇಕೆಂಬ ಅಂಶದ ಬಗ್ಗೆ ನಮಗೆ ವಿಶ್ವಾಸ ಮೂಡಿದೆ ಎಂದು ಅವರು ಹೇಳಿದರು.
ಜಿಇಎ ಇಂಡಿಯಾದ ನಿರ್ವಾಹಕ ನಿರ್ದೇಶಕರಾದ ಸುಕೇತ್ ಗೋಹಿಲ್ ಮಾತನಾಡಿ, ಅತ್ಯುತ್ಕೃಷ್ಟ ಗುಣಮಟ್ಟದ ಮೊಜಾರೆಲ್ಲಾ ಚೀಸ್ಗಾಗಿ ನಾವು ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಒದಗಿಸುತ್ತಿದ್ದೇವೆ. ಉದ್ಯಮವು ನಿರಂತರವಾಗಿ ಬೆಳೆಯುವುದಕ್ಕೆ ನೆರವಾಗುವಂತಹ ಇಂತಹ ಉತ್ಕೃಷ್ಟ ಮಾನದಂಡಗಳನ್ನು ಪರಿಚಯಿಸಲು ಇಚ್ಛಿಸುವ ಗ್ರಾಹಕರೊಂದಿಗೆ ಕೆಲಸ ಮಾಡುವುದು ನಮಗೆ ಸಂತೋಷದ ವಿಷಯ ಎಂದು ತಿಳಿಸಿದರು.