ಪಣಜಿ, ಸೆ.28- ಸಮಕಾಲೀನ ಅಗತ್ಯತೆಗಳನ್ನು ಸರಿದೂಗಿಸುವ ಸಲುವಾಗಿ ಉನ್ನತ ಶಿಕ್ಷಣವನ್ನು ಪುನಃಶ್ಚೇತನಗೊಳಿಸುವ ಅಗತ್ಯವಿದೆ ಎಂದು ಉಪರಾಷ್ಟ್ರಪತಿ ಡಾ.ಎಂ.ವೆಂಕಯ್ಯನಾಯ್ಡು ಸಲಹೆ ಮಾಡಿದ್ದಾರೆ.
ಕರಾವಳಿ ರಾಜ್ಯ ಗೋವಾದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿ-ಗೋವಾ) ಸಂಸ್ಥೆಯ 4ನೆ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಲಕ್ಷಾಂತರ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೂಲ ಉದ್ಯೋಗಶೀಲ ಕೌಶಲ್ಯವಿಲ್ಲದೆ ಪದವಿ ಪಡೆಯುತ್ತಿದ್ದಾರೆ. ಇದೊಂದು ಅನಪೇಕ್ಷಿತ ವಿದ್ಯಮಾನ. ಈ ಪ್ರವೃತ್ತಿ ತಡೆಗಟ್ಟುವ ಅಗತ್ಯವಿದೆ ಎಂದು ಅವರು ಹೇಳಿದರು.
ಶಿಕ್ಷಣ ಕೇವಲ ಉದ್ಯೋಗಕ್ಕಾಗಿಯೇ ಅಲ್ಲ. ಅದು ವಿದ್ಯಾರ್ಥಿಗಳನ್ನು ಸಶಕ್ತೀಕರಣಗೊಳಿಸಿ ಜಾಗತಿಕ ಪೌರರನ್ನಾಗಿಸಲು ನೆರವು ನೀಡಬೇಕೆಂದು ವೆಂಕಯ್ಯನಾಯ್ಡು ಅಭಿಪ್ರಾಯಪಟ್ಟರು.
ಭಾರತವು ಇಂದು ಅನೇಕ ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದೆ. ನವ ಮತ್ತು ಶಕ್ತಿಯುತ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳನ್ನು ಹೊರಹೊಮ್ಮಿಸಬೇಕು ಎಂದು ಕರೆಕೊಟ್ಟರು.