ಬೆಂಗಳೂರು: ಕೇಂದ್ರ ಸರ್ಕಾರ ಇ-ಫಾರ್ಮಸಿ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿರುವುದಕ್ಕೆ ವಿರೋಧಿಸಿ ಅಖಿಲ ಭಾರತೀಯ ಔಷಧಿ ಮಾರಾಟ ವ್ಯಾಪಾರಿಗಳ ಸಂಘ ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿದೆ.
ಹೌದು, ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರಲು ಹೊರಟಿರುವ ಇ-ಫಾರ್ಮಸಿ ವ್ಯವಸ್ಥೆಗೆ, ವಿರೋಧ ವ್ಯಕ್ತಪಡಿಸಿರುವ ಔಷಧಿ ಮಾರಾಟ ವ್ಯಾಪಾರಿಗಳು ಇಂದು ದೇಶಾದ್ಯಂತ ಬಂದ್‍ಗೆ ಕರೆ ನೀಡಿದ್ದಾರೆ. ಹೀಗಾಗಿ ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಮಧ್ಯರಾತ್ರಿಯ ವರೆಗೆ ದೇಶದ ಯಾವುದೇ ಮೆಡಿಕಲ್ ಶಾಪ್‍ಗಳು ಕಾರ್ಯನಿರ್ವಹಿಸುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗಿನಿಂದಲೇ ರಾಜಧಾನಿ ಬೆಂಗಳೂರಿನಲ್ಲಿಯೂ ಸಹ ಮೆಡಿಕಲ್ ಶಾಪ್ ಬಂದ್ ಬಿಸಿ ತಟ್ಟಿದೆ. ಮೆಡಿಕಲ್ ಶಾಪ್‍ಗಳು ಬಂದ್ ಆಗಿರುವ ಕಾರಣ, ತುರ್ತು ಔಷಧಿಗಾಗಿ ಜನರು ಪರದಾಟ ನಡೆಸುತ್ತಿದ್ದಾರೆ. ಅಲ್ಲದೇ ಕೆಲ ಆಸ್ಪತ್ರೆಗೆ ಹೊಂದಿಕೊಂಡಿರುವ ಮೆಡಿಕಲ್ ಶಾಪ್‍ಗಳು ಸಹ ಸಂಪೂರ್ಣವಾಗಿ ಸ್ಥಗಿತವಾಗಿದೆ.
ಕರ್ನಾಟಕ ರಾಜ್ಯದಲ್ಲಿ ಒಟ್ಟು 24 ಸಾವಿರ ಮೆಡಿಕಲ್ ಹಾಗೂ ಬೆಂಗಳೂರಿನಲ್ಲಿ ಆರೂವರೆ ಸಾವಿರಕ್ಕೂ ಹೆಚ್ಚು ಮೆಡಿಕಲ್ ಶಾಪ್‍ಗಳು ಬಂದ್ ಆಗಲಿದೆ. ಇನ್ನು ದೇಶಾದ್ಯಂತ ಸುಮಾರು 85 ಲಕ್ಷ ಮೆಡಿಕಲ್ ಶಾಪ್ ಗಳು ಸಹ ಬಂದ್ ಸಂಪೂರ್ಣ ಬೆಂಬಲ ಸೂಚಿಸಿವೆ.