ನವದೆಹಲಿ, ಸೆ.28: ತಮಗೆ ಲಭಿಸಿರುವ ವಿಶ್ವಸಂಸ್ಥೆಯ ಪ್ರತಿಷ್ಠಿತ ಚಾಂಪಿಯನ್ ಆಫ್ ದಿ ಅರ್ಥ್ ಪ್ರಶಸ್ತಿಯನ್ನು ದೇಶಕ್ಕೆ ಸಮರ್ಪಿಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಪ್ರಶಸ್ತಿಗಾಗಿ ತಮ್ಮನ್ನು ಆಯ್ಕೆ ಮಾಡಿರುವುದಕ್ಕಾಗಿ ವಿಶ್ವಸಂಸ್ಥೆಗೆ ಕೃತಜ್ಞತೆ ಸಲ್ಲಿಸಿರುವ ಮೋದಿ, ಈ ಪುರಸ್ಕಾರವು ವೈಯಕ್ತಿಕವಾಗಿ ಲಭಿಸಿಲ್ಲ. ಆದರೆ ಶತಮಾನಗಳ ಮೂಲಕ ಬಂದಿರುವ ಭಾರತದ ದೊಡ್ಡ ಸಂಪ್ರದಾಯ, ಪ್ರಕೃತಿ ಜೊತೆ ಸಹಜೀವನದಂಥ ಚಿಂತನಾ ಮೌಲ್ಯಗಳಿಂದ ಲಭಿಸಿರುವುದಾಗಿ ಮೋದಿ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಮನುಕುಲವು ನಿಸರ್ಗದ ಪ್ರಾಮುಖ್ಯತೆ ಒಪ್ಪಿಕೊಳ್ಳಲು ಆರಂಭಿಸಿದೆ ಎಂದು ಹೇಳಿರುವ ಪ್ರಧಾನಿ, ಪ್ರಕೃತಿ ಸಂರಕ್ಷಣೆಯಲ್ಲಿ ಎಲ್ಲರೂ ಭಾಗಿಯಾಗಿ ಸಂತೋಷ ಪಡಬೇಕೆಂದು ದೇಶವಾಸಿಗಳಿಗೆ ಕರೆ ನೀಡಿದ್ದಾರೆ.