ದಕ್ಷಿಣ ಏಷ್ಯಾ ಶಾಂತಿ-ಸ್ಥಿರತೆಗೆ ಭಯೋತ್ಪಾದನೆ ಅತಿ ದೊಡ್ಡ ಆತಂಕ: ಸಚಿವೆ ಸುಷ್ಮಾ ಸ್ವರಾಜ್

ನ್ಯೂಯಾರ್ಕ್, ಸೆ.28 -ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಭಯೋತ್ಪಾದನೆ ಅತಿ ದೊಡ್ಡ ಆತಂಕವಾಗಿಯೇ ಮುಂದುವರಿದಿದೆ ಎಂದು ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಉಗ್ರರಿಗೆ ಬೆಂಬಲ-ಸಹಕಾರದ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ಅಗತ್ಯವಿದೆ ಎಂದು ಪಾಕಿಸ್ತಾನದ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿದ್ದಾರೆ.

ವಿಶ್ವಸಂಸ್ಥೆಯ 73ನೇ ಸಾಮಾನ್ಯ ಅಧಿವೇಶನ ಸಂದರ್ಭದಲ್ಲಿ ನ್ಯೂಯಾರ್ಕ್‍ನಲ್ಲಿ ನಡೆದ ಸಾರ್ಕ್ ದೇಶಗಳ ವಿದೇಶಾಂಗ ವ್ಯವಹಾರಗಳ ಸಚಿವರ ಸಭೆಯಲ್ಲಿ ಸುಷ್ಮಾ ಮಾತನಾಡಿದರು.

ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೆಹಮೂದ್ ಖುರೇಷಿ ಅವರ ಸಮ್ಮುಖದಲ್ಲೇ ಪಾಕ್‍ನನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಅವರು, ಜನರ ನಿರೀಕ್ಷೆಗಳು ಮತ್ತು ಆಶೋತ್ತರಗಳನ್ನೂ ಈಡೇರಿಸಿದರೆ ಮಾತ್ರ ಪ್ರಾದೇಶಿಕ ಸಹಕಾರ ಯಶಸ್ವಿಯಾಗುತ್ತದೆ ಎಂಬ ಮಾತನ್ನು ಸುಷ್ಮಾ ಸ್ವರಾಜ್ ಪ್ರತಿಪಾದಿಸಿದರು.

ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಾಲಿ ಅಧ್ಯಕ್ಷತೆ ವಹಿಸಿದ್ದ ಈ ಸಭೆಯಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ಹಾಗೂ ಶ್ರೀಲಂಕಾ ವಿದೇಶಾಂಗ ಸಚಿವರೂ ಸಹ ಭಾಗವಹಿಸಿದ್ದರು.

ಸಭೆಯಿಂದ ನಿರ್ಗಮಿಸಿದ ಸುಷ್ಮಾ : ತಮ್ಮ ಭಾಷಣದಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗದುಕೊಂಡ ನಂತರ, ಆ ದೇಶದ ವಿದೇಶಾಂಗ ಸಚಿವರು ಭಾಷಣ ಮಾಡುವುದಕ್ಕೆ ಮುನ್ನವೇ ಸಭೆಯಿಂದ ನಿರ್ಗಮಿಸಿದರು. ಇದರಿಂದ ಪಾಕಿಸ್ತಾನ ಪೇಚಿಗೆ ಸಿಲುಕುವಂತಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ