ಬೆಂಗಳೂರು, ಸೆ.27- ನಾಳೆ ಔಷಧ ವ್ಯಾಪಾರ ಇರುವುದಿಲ್ಲ. ಎಲ್ಲ ಕಡೆ ಔಷಧಿ ವ್ಯಾಪಾರ ಮಳಿಗೆಗಳು ಬಂದ್ ಆಗಿರಲಿವೆ. ಕೇಂದ್ರ ಸರ್ಕಾರ ಆನ್ಲೈನ್ನಲ್ಲಿ ಔಷಧಿ ಮಾರಾಟಕ್ಕೆ ಅನುಮತಿ ನೀಡಲು ಮುಂದಾಗಿರುವುದನ್ನು ವಿರೋಧಿಸಿ ನಾಳೆ ದೇಶಾದ್ಯಂತ ಕರೆ ಕೊಟ್ಟಿರುವ ಔಷಧ ಮಾರಾಟ ಬಂದ್ನ ಬಿಸಿ ರಾಜ್ಯದಲ್ಲೂ ತಟ್ಟಲಿದೆ.
ಅಗತ್ಯವಿರುವವರು ಇಂದೇ ಔಷಧಿಗಳನ್ನು ಕೊಳ್ಳುವುದು ಉತ್ತಮ. ಇ-ಫಾರ್ಮಸಿ ಎಂಬ ವಿತರಣಾ ವ್ಯವಸ್ಥೆಯನ್ನು ರಾಷ್ಟ್ರಮಟ್ಟದಲ್ಲಿ ತರಾತುರಿಯಲ್ಲಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ಕಾನೂನಾತ್ಮಕವಲ್ಲದ ರೀತಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿ ಗ್ರಾಹಕರ ಹಿತಾಸಕ್ತಿಯನ್ನು ಕಡೆಗಣಿಸಿದೆ ಎಂದು ಔಷಧ ವ್ಯಾಪಾರಿಗಳ ಸಂಘ ಆರೋಪಿಸಿದೆ.
ಇ-ಫಾರ್ಮಸಿ ಎಂಬುದು ಔಷಧ ಅಂಗಡಿಯಲ್ಲ. ಔಷಧಿಯ ಮೂಲವೂ ಗೊತ್ತಿಲ್ಲದೆ, ವಿತರಕನು ಯಾರೆಂಬುದರ ಅರಿವೇ ಇಲ್ಲದೆ ಈ ವ್ಯವಸ್ಥೆ ಮೂಲಕ ಔಷಧಿಗಳನ್ನು ಎಲ್ಲೆಂದರಲ್ಲಿಗೆ ವಿತರಣೆ ಮಾಡಿ ಗ್ರಾಹಕನ ಆರೋಗ್ಯ ಹದಗೆಡುವ ಸಾಧ್ಯತೆಯಿರುತ್ತದೆ. ನಕಲಿ ಹಾಗೂ ಮಾದಕ ವಸ್ತುಗಳ ವ್ಯಾಪಾರ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಸಂಘ ಆತಂಕ ವ್ಯಕ್ತಪಡಿಸಿದೆ.
ಮಾದಕ ವಸ್ತುಗಳು ವಿತರಣೆಯಾದಲ್ಲಿ ಯುವಜನರು ಬಲಿಪಶುಗಳಾಗುತ್ತಾರೆ. ಹೀಗಾಗಿ ಇ-ಫಾರ್ಮಸಿ ವ್ಯವಸ್ಥೆ ರದ್ದುಪಡಿಸಬೇಕು. ಅದಕ್ಕಾಗಿ ದೇಶಾದ್ಯಂತ ನಾಳೆ ಔಷಧ ಮಳಿಗೆಗಳನ್ನು ಬಂದ್ ಮಾಡಿ ದೇಶಾದ್ಯಂತ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿರುವುದಾಗಿ ಸಂಘದ ಅಧ್ಯಕ್ಷ ರಘುನಾಥ್ರೆಡ್ಡಿ ತಿಳಿಸಿದ್ದಾರೆ.