ಬಿಬಿಎಂಪಿ ಮೇಯರ್ ಗಾದಿಗಾಗಿ ನಡೆಯುತ್ತಿದ್ದ ಪೈಪೋಟಿಗೆ ತೆರೆ

ಬೆಂಗಳೂರು, ಸೆ.27- ಕಳೆದ ಎರಡು ವಾರಗಳಿಂದ ಬಿಬಿಎಂಪಿ ಮೇಯರ್ ಗಾದಿಗಾಗಿ ನಡೆಯುತ್ತಿದ್ದ ಪೈಪೋಟಿಗೆ ತೆರೆ ಬಿದ್ದಂತಾಗಿದೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಜಯನಗರ ವಾರ್ಡ್ ಸಂಖ್ಯೆ 153ರ ಸದಸ್ಯೆ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು 52ನೆ ಮೇಯರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾದಂತಾಗಿದೆ.

ಮೇಯರ್ ಸಂಪತ್‍ರಾಜ್ ಅವರ ಅಧಿಕಾರಾವಧಿ ಇಂದು ಕೊನೆಗೊಳ್ಳಲಿದ್ದು, ನಾಳೆ ನಡೆಯಲಿರುವ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಪಕ್ಷೇತರರ ಮೈತ್ರಿಯ ಒಮ್ಮತದ ಅಭ್ಯರ್ಥಿಯಾಗಿ ಗಂಗಾಂಬಿಕೆ ಹೊರಹೊಮ್ಮಿದ್ದಾರೆ. ಈ ಮೂಲಕ ನಾಲ್ಕು ದಶಕಗಳ ನಂತರ ಲಿಂಗಾಯತರೊಬ್ಬರು ಬೆಂಗಳೂರು ಮಹಾನಗರದ ಪ್ರಥಮ ಪ್ರಜೆಯಾಗುವ ಅದೃಷ್ಟ ಖುಲಾಯಿಸಿದೆ. 40 ವರ್ಷಗಳ ಹಿಂದೆ ಪುಟ್ಟೇಗೌಡ ಅವರು ಮೇಯರ್ ಆಗಿದ್ದನ್ನು ಹೊರತುಪಡಿಸಿದರೆ ಲಿಂಗಾಯತರಲ್ಲಿ ಯಾರೂ ಮೇಯರ್ ಆಗಿರಲಿಲ್ಲ.

ನಾಳೆ ಬೆಳಗ್ಗೆ 11.30ಕ್ಕೆ ಬಿಬಿಎಂಪಿ ಆವರಣದಲ್ಲಿ ಮೇಯರ್ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್-ಜೆಡಿಎಸ್ ತಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡಲಿದೆ. ಪಕ್ಷೇತರ ಸದಸ್ಯರ ಬೆಂಬಲ ಪಡೆಯಬೇಕಾಗಿರುವುದರಿಂದ ಪಕ್ಷೇತರ ಸದಸ್ಯರನ್ನು ಹಿಡಿದಿಟ್ಟುಕೊಂಡಿರುವ ಕಾಂಗ್ರೆಸ್ ಪಕ್ಷ ಅವರನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದಿದ್ದು, ನಾಳೆ ಮತದಾನ ನಡೆಯುವ ಸಮಯಕ್ಕೆ ಕರೆತರುವ ತಂತ್ರ ರೂಪಿಸಿದೆ.

ಕಳೆದ ಮೂರು ವರ್ಷಗಳಿಂದ ಪಕ್ಷೇತರರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತಕ್ಕೆ ಬೆಂಬಲಿಸಿದ್ದರು. ಈ ಬಾರಿ ಬಿಜೆಪಿ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಪಕ್ಷೇತರರ ಮನವೊಲಿಸಿ ಕೊನೆ ಕ್ಷಣದವರೆಗೆ ಅವರನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದಾರೆ. ರಾಮಲಿಂಗಾರೆಡ್ಡಿ ಅವರೊಂದಿಗೆ ಅವರು ಚುನಾವಣಾ ವೇಳೆ ಆಗಮಿಸಿ ಮೇಯರ್ ಅಭ್ಯರ್ಥಿ ಗಂಗಾಂಬಿಕೆ ಪರ ಮತ ಚಲಾಯಿಸಲಿದ್ದಾರೆ.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಬೆಂಬಲಿತ ಅಭ್ಯರ್ಥಿಯಾದ ಗಂಗಾಂಬಿಕೆ ಹಾಗೂ ಶಾಸಕ ಎನ್.ಎ.ಹ್ಯಾರಿಸ್ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಅವರ ಬೆಂಬಲಿತ ಅಭ್ಯರ್ಥಿ ಸೌಮ್ಯ ಶಿವಕುಮಾರ್ ಮತ್ತು ಸಚಿವ ಕೆ.ಜೆ.ಜಾರ್ಜ್ ಬೆಂಬಲಿತ ಅಭ್ಯರ್ಥಿ ಲಾವಣ್ಯ ಗಣೇಶ್‍ರೆಡ್ಡಿ ಮತ್ತು ದಿನೇಶ್ ಗುಂಡೂರಾವ್ ಅವರ ಬೆಂಬಲಿತ ಅಭ್ಯರ್ಥಿ ಲತಾ ಕುವರ್ ರಾಥೋಡ್ ಅವರ ನಡುವೆ ಮೇಯರ್ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿತ್ತು.

ನಿನ್ನೆಯಿಂದ ಮೇಯರ್ ಅಭ್ಯರ್ಥಿ ಆಯ್ಕೆ ಬಗ್ಗೆ ಕಾಂಗ್ರೆಸ್ ಮುಖಂಡರೊಂದಿಗೆ ಸತತವಾಗಿ ಸಭೆಗಳು ನಡೆದಿದ್ದವು. ನಿನ್ನೆ ಒಮ್ಮತ ಮೂಡಿರಲಿಲ್ಲ. ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಎಲ್ಲ ಮುಖಂಡರು ಚರ್ಚೆ ನಡೆಸಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ.
ರಾಮಲಿಂಗಾರೆಡ್ಡಿ ಅವರ ಬೆಂಬಲಿತ ಅಭ್ಯರ್ಥಿ ಗಂಗಾಂಬಿಕೆ ಅವರನ್ನು ಮೇಯರ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಲಾಯಿತು.
ಕಳೆದ ಬಾರಿಯೂ ಸೌಮ್ಯ ಶಿವಕುಮಾರ್ ಅವರಿಗೆ ಕೊನೆ ಕ್ಷಣದಲ್ಲಿ ಮೇಯರ್ ಅಭ್ಯರ್ಥಿ ಹುದ್ದೆ ತಪ್ಪಿದ್ದ ಹಿನ್ನೆಲೆಯಲ್ಲಿ ಅವರು ತೀವ್ರ ಬೇಸರಗೊಂಡಿದ್ದರು. ಮುಖಂಡರು ಅವರ ಮನವೊಲಿಸುವ ಯತ್ನ ನಡೆಸಿದರು.

ಸೌಮ್ಯ ಶಿವಕುಮಾರ್ ಮತ್ತು ಗಂಗಾಂಬಿಕೆ ನಡುವೆ ಕೊನೆ ಕ್ಷಣದವರೆಗೂ ಪೈಪೋಟಿ ಏರ್ಪಟ್ಟಿತ್ತು. ಈ ಪೈಪೋಟಿ ಜಾತಿಯ ಬಣ್ಣ ಕೂಡ ಪಡೆಯಿತು. ಗಂಗಾಂಬಿಕೆ ಪರವಾಗಿ ಲಿಂಗಾಯತರು ಲಾಬಿ ನಡೆಸಿದರೆ, ಸೌಮ್ಯ ಶಿವಕುಮಾರ್ ಪರವಾಗಿ ಒಕ್ಕಲಿಗರು ಲಾಬಿ ನಡೆಸಿದರು. ಬಹುತೇಕರು ಗಂಗಾಂಬಿಕೆ ಅವರನ್ನು ಮೇಯರ್ ಮಾಡುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರಾದರೂ ನಾಳೆ 11 ಗಂಟೆಗೆ ಮೇಯರ್ ಚುನಾವಣೆ ಇದ್ದು, ಕೊನೆ ಕ್ಷಣದಲ್ಲಿ ಯಾವುದೇ ಬದಲಾವಣೆಗಳಾದರೂ ಆಶ್ಚರ್ಯ ಪಡಬೇಕಿಲ್ಲ.

ಡೆಪ್ಯೂಟಿ ಮೇಯರ್ ಹುದ್ದೆಗೆ ಭದ್ರೇಗೌಡರು ಪಟ್ಟು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಇರುವ ಬಿಬಿಎಂಪಿಯಲ್ಲಿ ಮೇಯರ್ ಸ್ಥಾನ ಕಾಂಗ್ರೆಸ್‍ಗೆ ಮೀಸಲಾಗಿದ್ದು, ಉಪಮೇಯರ್ ಹುದ್ದೆ ಜೆಡಿಎಸ್‍ಗೆ ಸಿಗಲಿರುವ ಹಿನ್ನೆಲೆಯಲ್ಲಿ ಈ ಹುದ್ದೆ ಗಿಟ್ಟಿಸಿಕೊಳ್ಳಲು ಹಲವು ಸದಸ್ಯರು ಪ್ರಯತ್ನ ನಡೆಸಿದ್ದಾರೆ.
ಜೆಡಿಎಸ್ ಸದಸ್ಯರಾದ ಭದ್ರೇಗೌಡ, ರಮಿಳಾ ಉಮಾಶಂಕರ್ ಅವರ ಹೆಸರುಗಳು ಪ್ರಬಲವಾಗಿ ಕೇಳಿಬಂದಿವೆ. ಈ ಹಿಂದೆ ಉಪಮೇಯರ್ ಆಗಿದ್ದ ಹೇಮಲತಾ ಗೋಪಾಲಯ್ಯ ಅವರ ಹೆಸರು ಕೂಡ ಉಪಮೇಯರ್ ಹುದ್ದೆಗೆ ಕೇಳಿಬಂದಿದೆ.
ಮೇಯರ್ ಹುದ್ದೆಯನ್ನು ಲಿಂಗಾಯತರಿಗೆ ನೀಡಿದರೆ, ಉಪಮೇಯರ್ ಹುದ್ದೆಯನ್ನು ಒಕ್ಕಲಿಗರಿಗೆ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಮೇಯರ್ ಹುದ್ದೆಯನ್ನು ಮಹಿಳೆ ಅಲಂಕರಿಸುತ್ತಿದ್ದು, ಉಪಮೇಯರ್ ಹುದ್ದೆಯನ್ನು ಪುರುಷರಿಗೆ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಾಗ್‍ಪುರ ವಾರ್ಡ್ ಸದಸ್ಯ ಭದ್ರೇಗೌಡರಿಗೆ ಈ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಈಗಾಗಲೇ ಅವರು ತಮ್ಮ ಪಕ್ಷದ ವರಿಷ್ಠರನ್ನು, ಸ್ವಾಮೀಜಿ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ. ಈ ನಡುವೆ ರಮಿಳಾ ಪರವಾಗಿ ಎಚ್.ವಿಶ್ವನಾಥ್, ಬಂಡೆಪ್ಪ ಕಾಶಂಪೂರ್ ಲಾಬಿ ನಡೆಸಿದ್ದಾರೆ.
ಕೊನೆ ಕ್ಷಣದಲ್ಲಿ ಏನಾಗಲಿದೆಯೋ ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ