ಬೆಂಗಳೂರು, ಸೆ.27-ರೈತ ಸಮುದಾಯದ ಬದುಕನ್ನು ರಕ್ಷಿಸಲು ಕರ್ನಾಟಕ ಜನಪರ ವೇದಿಕೆ ವತಿಯಿಂದ “ನಮ್ಮ ಬೆಳೆ- ನಮ್ಮ ಬೆಲೆ’ ಚಳವಳಿ ಪ್ರಾರಂಭಿಸಲಾಗಿದೆ.
ನಗರದ ಟೌನ್ಹಾಲ್ ಬಳಿ ವೇದಿಕೆಯ ರಾಜ್ಯಾಧ್ಯಕ್ಷ ಕೆರೆ ಚಳವಳಿ ರಮೇಶ್ಗೌಡ ಚಾಲನೆ ನೀಡಿದರು.
ಮಧ್ಯವರ್ತಿಗಳಿಂದ ದೂರವಿದ್ದು, ರೈತರು ಬೆಳೆದ ಬೆಳೆಗಳನ್ನು ಅವರೇ ಮಾರಾಟ ಮಾಡುವ ಮೂಲಕ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಬಹುದಾಗಿದೆ ಎಂದು ತಿಳಿ ಹೇಳಲಾಯಿತು.
ರಾಗಿ, ಅಕ್ಕಿ, ತರಕಾರಿ, ನೀರು, ಎಳನೀರು, ತೆಂಗಿನ ಕಾಯಿಯನ್ನು ಸ್ಥಳದಲ್ಲಿ ಮಾಋಆಟ ಮಾಡುವ ಮೂಲಕ ರೈತರನ್ನು ಉತ್ತೇಜಿಸಲಾಯಿತು.
ದಿನದಿಂದ ದಿನಕ್ಕೆ ಕೆಲವೆಡೆ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಮತ್ತೆ ಕೆಲ ಪ್ರದೇಶಗಳಲ್ಲಿ ಮಳೆ ಅತಿಯಾಗಿ ಅತಿವೃಷ್ಟಿಯಾಗುತ್ತಿದೆ.
ಮಣ್ಣಿನಲ್ಲಿರುವ ಪರಿಸರ ಸ್ನೇಹಿ ಸೂಕ್ಷ್ಮಜೀವಿಗಳ ಸರ್ವನಾಶವಾಗುತ್ತಿದ್ದು, ಇದರಿಂದ ಕೃಷಿ ಭೂಮಿ ಅವನತಿಯಾಗಿದೆ. ರಾಸಾಯನಿಕ ಗೊಬ್ಬರ, ಕೀಟನಾಶಕಗಳಿಂದ ನೈಸರ್ಗಿಕ ಜೀವವೈವಿಧ್ಯತೆ ಹಾಳಾಗಿದೆ. ಬೆಳೆ ನಾಶವಾಗಿ ಲಕ್ಷಾಂತರ ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿದೆ ಎಂದು ಮುಖಂಡರು ಬೇಸರ ವ್ಯಕ್ತಪಡಿಸಿದರು.
ಭೂಮಿ, ನೀರು, ಗೊಬ್ಬರ, ಬೀಜ, ಮಾರುಕಟ್ಟೆ ಎಂದಿಗೂ ರೈತರ ಹಿಡಿತದಲ್ಲಿರಬೇಕೇ ಹೊರತು ಯಾವುದೇ ಕಂಪೆನಿ ಹಾಗೂ ಸರ್ಕಾರದ ಹಿಡಿತದಲ್ಲಿರಬಾರದು ಎಂದು ರೈತ ಮುಖಂಡರು ಪ್ರತಿಪಾದಿಸಿದರು.