ನವದೆಹಲಿ: ಮುಸ್ಲಿಂರ ಪ್ರಾರ್ಥನೆಗೆ ಮಸೀದಿ ಅಗತ್ಯವೋ ಇಲ್ಲವೋ ಎನ್ನುವ ಕುರಿತಾಗಿ ಸರ್ವೋಚ್ಛ ನ್ಯಾಯಾಲಯ ಇಂದು ಮಹತ್ತರ ತೀರ್ಪನ್ನು ನೀಡಲಿದೆ. ಸುಪ್ರೀಂ ಕೋರ್ಟ್ನ ಇಂದಿನ ತೀರ್ಪು ದೇಶದ ನಾಗರಿಕರ ಮೇಲೆ ಸಹಜವಾಗಿಯೇ ಪರಿಣಾಮ ಬೀರಲಿದೆ.
ಮುಸ್ಲಿಂರು ಪ್ರಾರ್ಥನೆ ಸಲ್ಲಿಸಲು ಮಸೀದಿಯ ಅಗತ್ಯವಿಲ್ಲ, ಯಾವ ಪ್ರದೇಶದಲ್ಲಿ ಬೇಕಾದರೂ ಅವರು ಪ್ರಾರ್ಥನೆ ಸಲ್ಲಿಸಬಹುದು ಎಂಬುದಾಗಿ ಸುಪ್ರೀಂ ಕೋರ್ಟ್ 1994ರಲ್ಲಿ ತೀರ್ಪು ನೀಡಿತ್ತು. ಮಸೀದಿಯ ಜಾಗವನ್ನು ಮಂದಿರ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು ಎಂದು ಸುಪ್ರೀಂ ಹೇಳಿತ್ತು.
ಇಂದಿನ ತೀರ್ಪು ಅಯೋಧ್ಯಾ ಪ್ರಕರಣಕ್ಕೆ ಸಂಬಂಧಪಟ್ಟಿದ್ದರಿಂದ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. 1994ರ ಸುಪ್ರೀಂ ತೀರ್ಪನ್ನು ಪ್ರಶ್ನಿಸಿ ಹಲವು ಮುಸ್ಲಿಂ ಸಂಘಟನೆಗಳು ಮೇಲ್ಮನವಿ ಸಲ್ಲಿಸಿದ್ದವು.
ಸುಪ್ರೀಂನ ಇಂದಿನ ತೀರ್ಪು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಮಾಡಬೇಕೋ ಅಥವಾ ಬೇಡವೋ ಎನ್ನುವುದನ್ನೂ ನಿರ್ಧರಿಸಲಿದೆ. ಇದರ ಜೊತೆಗೆ ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ದೀಪಕ್ ಮಿಶ್ರಾರ ಕೊನೆಯ ತೀರ್ಪು:
ಸದ್ಯ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿರುವ ದೀಪಕ್ ಮಿಶ್ರಾ ಕೊನೆಯ ತೀರ್ಪು ಇಂದು ನೀಡಲಿದ್ದು, ಇದರೊಂದಿಗೆ ನಿವೃತ್ತಿಯಾಗಲಿದ್ದಾರೆ. ದೇಶದ ಜನತೆ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುವ ವಿಚಾರದ ಕುರಿತಾಗಿ ದೀಪಕ್ ಮಿಶ್ರಾ ತಮ್ಮ ಕೊನೆಯ ತೀರ್ಪು ನೀಡಲಿದ್ದಾರೆ.