ಬೆಂಗಳೂರು, ಸೆ.25- ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ ನಗರದಲ್ಲಿ ನಾನಾ ಅವಾಂತರ ಸೃಷ್ಟಿಸಿದೆ.
ನಗರದ ಹಲವೆಡೆ 25ಕ್ಕೂ ಹೆಚ್ಚು ಮರಗಳು ಧರೆಗುರುಳಿಬಿದ್ದಿದ್ದು, ಕೆಲ ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದೆ.
ಮಳೆಯ ರಭಸಕ್ಕೆ ಗೆಳೆಯರ ಬಳಗದಲ್ಲಿ ಬೃಹತ್ ಮರವೊಂದು ಉರುಳಿಬಿದ್ದಿದೆ. ಅದೃಷ್ಟವಶಾತ್ ಮರ ಕಟ್ಟಡದ ಮೇಲೆ ಬಿದ್ದ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ.
ಇದೇ ರೀತಿ ರಾಜಾಜಿನಗರ, ಬಸವೇಶ್ವರನಗರ, ಮಲ್ಲೇಶ್ವರಂ, ವಿಜಯನಗರ, ಗೋವಿಂದರಾಜನಗರ, ಚಂದ್ರಾ ಲೇಔಟ್ ಮತ್ತಿತರ ಪ್ರದೇಶಗಳಲ್ಲೂ ಮರಗಳು ಉರುಳಿ ಬಿದ್ದಿವೆ. ರಾಜಾಜಿನಗರ 1ನೆ ಹಂತದಲ್ಲಿ ಪಾದಚಾರಿ ಮಾರ್ಗ ಕುಸಿದು ಬಿದ್ದಿದೆ.
ಕೆಲ ಪ್ರದೇಶಗಳಲ್ಲಿ ಮರ ರಸ್ತೆಗೆ ಉರುಳಿ ಬಿದ್ದಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಕಿಲೋ ಮೀಟರ್ವರೆಗೂ ವಾಹನಗಳ ಸಾಲು ಕಂಡುಬಂದಿತು. ರಾತ್ರಿಯಿಡೀ ಹರಸಾಹಸ ನಡೆಸಿದ ಬಿಬಿಎಂಪಿ ಸಿಬ್ಬಂದಿಗಳು ರಸ್ತೆಗೆ ಉರುಳಿಬಿದ್ದ ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಕೆಲ ನಾಗರಿಕರು ರಾತ್ರಿಯಿಡೀ ಮನೆಯಿಂದ ನೀರನ್ನು ಹೊರಹಾಕುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ರಸ್ತೆಗಳಲ್ಲಿ ಆಳುದ್ದ ನೀರು ನಿಂತ ಪರಿಣಾಮ ವಾಹನ ಸವಾರರು ಸಕಾಲಕ್ಕೆ ಮನೆ ಸೇರಲು ಸಾಧ್ಯವಾಗದೆ ಪರದಾಡುವಂತಾಗಿತ್ತು. ಬೆಳಗ್ಗೆವರೆಗೂ ಬಿಟ್ಟುಬಿಡದೆ ಸುರಿದ ಮಳೆ ನಗರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿತ್ತು.
ಮುನ್ನೆಚ್ಚರಿಕೆ: ಇನ್ನೂ ನಾಲ್ಕು ದಿನಗಳ ಕಾಲ ನಗರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಳೆ ಅನಾಹುತ ತಗ್ಗಿಸಲು ಬಿಬಿಎಂಪಿ ಮುನ್ನೆಚ್ಚರಿಕೆ ವಹಿಸಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಳೆ ಅನಾಹುತ ತಪ್ಪಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಮಳೆ ಹಾನಿ ತಪ್ಪಿಸಲು ಸನ್ನದ್ಧರಾಗಿರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜತೆಗೆ ಸಾರ್ವಜನಿಕರೂ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.