ಬೆಂಗಳೂರು, ಸೆ.25- ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಜನವರಿ ಒಂದರಿಂದ ರಾಜ್ಯ ಸರ್ಕಾರದ ಸಚಿವಾಲಯದ ಎಲ್ಲಾ ಇಲಾಖೆಗಳು ಕಾಗದ ರಹಿತ ಕಚೇರಿಗಳಾಗಲಿವೆ.
ಈಗಾಗಲೇ ಪ್ರಯೋಗಿಕವಾಗಿ ಕೆಲವು ಇಲಾಖೆಗಳಲ್ಲಿ ಇ-ಆಫೀಸ್ ತಂತ್ರಾಂಶ ಅಳವಡಿಸಿ, ಕಚೇರಿಗಳನ್ನು ಕಾಗದ ರಹಿತ ಕಚೇರಿಯನ್ನಾಗಿ ಮಾಡಲಾಗಿದ್ದು, ಇದು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಕಚೇರಿಗಳಲ್ಲೂ ಇ-ಆಫೀಸ್ ತಂತ್ರಾಂಶ ಅಳವಡಿಸಲು ಸರ್ಕಾರ ನಿರ್ಧರಿಸಿದೆ.
ವಿದ್ಯುನ್ಮಾನ ಕಡತಗಳ ವ್ಯವಸ್ಥೆಯಾಗಿರುವ ಇ-ಆಫೀಸ್ ತಂತ್ರಾಂಶವನ್ನು ರಾಜ್ಯ ಸರ್ಕಾರದ ಸಚಿವಾಲಯದ ಎಲ್ಲಾ ಇಲಾಖೆಗಳಲ್ಲಿ ಅನುಷ್ಠಾನಗೊಳಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ಜಯಭಾಸ್ಕರ್ ಸುತ್ತೋಲೆ ಹೊರಡಿಸಿ, ಎಲ್ಲಾ ಸಿಬ್ಬಂದಿ ಅಗತ್ಯವಾಗಿ ತರಬೇತಿ ಪಡೆಯಬೇಕು. ನವೆಂಬರ್ ಅಂತ್ಯದೊಳಗೆ ಎಲ್ಲಾ ಸಿಬ್ಬಂದಿ ತರಬೇತಿ ಪೂರ್ಣಗೊಳಿಸಿ ಜನವರಿಯಿಂದ ಇ-ಆಫೀಸ್ ಯೋಜನೆ ಅನುಷ್ಠಾನಕ್ಕೆ ಸಿದ್ಧರಾಗಿರಬೇಕು ಎಂದು ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜುಲೈ ತಿಂಗಳಲ್ಲಿ ಮಂಡಿಸಿದ ಆಯವ್ಯಯ ಭಾಷಣದಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳನ್ನು ಕಾಗದ ರಹಿತ ಕಚೇರಿಯನ್ನಾಗಿ ಮಾಡುವುದಾಗಿ ಘೋಷಣೆ ಮಾಡಿದ್ದರು. ಇದರ ಪ್ರಕಾರ ಎಲ್ಲಾ ಇಲಾಖೆಗಳು ಸಮಾನ ಮಾನದಂಡ ಅಳವಡಿಸಿಕೊಳ್ಳಲು ಮತ್ತು ಇ ಆಫೀಸ್ ತಂತ್ರಾಂಶವನ್ನು ಅಳವಡಿಸಿಕೊಳ್ಳಲು ನೋಡಲ್ ಏಜೆನ್ಸಿಯಾಗಿ ಇ-ಆಡಳಿತ ಕೇಂದ್ರವನ್ನು ಆಯ್ಕೆ ಮಾಡಲಾಗಿದೆ. ಇ-ಆಫೀಸ್ ತಂತ್ರಾಂಶವನ್ನು ಅಳವಡಿಸಿಕೊಳ್ಳಲು ಎಲ್ಲಾ ಇಲಾಖೆಗಳಿಗೆ ಬೇಕಾಗುವ ತಂತ್ರಾಂಶ, ತರಬೇತಿ ಹಾಗೂ ಸಹಕಾರವನ್ನು ಇ-ಆಡಳಿತ ಇಲಾಖೆ ನೀಡುತ್ತದೆ. ಇ-ಆಫೀಸ್ ಅನುಷ್ಠಾನ ಮತ್ತು ಕಾರ್ಯಾಚರಣೆಯಲ್ಲಿ ಇಲಾಖೆಗಳಿಗೆ ಎದುರಾಗುವ ಎಲ್ಲಾ ತಾಂತ್ರಿಕ ಗೊಂದಲಗಳನ್ನು ನಿವಾರಿಸಲು ಸಹ ಇ-ಆಡಳಿತ ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ.
ಹಾಲಿ ಇ-ಆಫೀಸ್ ತಂತ್ರಾಂಶ ಹಲವಾರು ಇಲಾಖೆಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಈ ಇಲಾಖೆಗಳು ತಮ್ಮ ಎಲ್ಲಾ ಪತ್ರ ಹಾಗೂ ಕಡತಗಳನ್ನು ಇ-ಆಫೀಸ್ ತಂತ್ರಾಂಶದ ಮೂಲಕ ಯಶಸ್ವಿಯಾಗಿ ನಿರ್ವಹಿಸುತ್ತಿವೆ. ಇ-ಆಫೀಸ್ ತಂತ್ರಾಂಶವನ್ನು ಎಲ್ಲಾ ಕಚೇರಿಗಳಲ್ಲಿ ಅಳವಡಿಸುವ ಯೋಜನೆ ಇದೆ. ಸದ್ಯದಲ್ಲೇ ಸಚಿವಾಲಯದಲ್ಲಿ ಇದನ್ನು ಅಳವಡಿಸಲು ಉದ್ದೇಶಿಸಲಾಗಿದೆ ಎಂದು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ತಂತ್ರಾಂಶವನ್ನು ಉಪಯೋಗಿಸುವ ಎಲ್ಲಾ ಸಿಬ್ಬಂದಿ ವರ್ಗದವರು ಒಂದು ಗಣಕಯಂತ್ರ ಹೊಂದಿರಬೇಕಾಗುತ್ತದೆ. ಗಣಕಯಂತ್ರವನ್ನು ಹೊಂದಿರದ ಸಿಬ್ಬಂದಿಗೆ ಇ-ಆಡಳಿತ ಕೇಂದ್ರದ ವತಿಯಿಂದ ಅದನ್ನು ಒದಗಿಸಲು ನಿರ್ಧರಿಸಲಾಗಿದೆ. ತಂತ್ರಾಂಶವನ್ನು ಅಳವಡಿಸುವ ಕಚೇರಿಯಲ್ಲಿ ಕನಿಷ್ಠ ಒಂದು ಸ್ಕ್ಯಾನರ್ ಯಂತ್ರ, ತಂತ್ರಾಂಶವನ್ನು ಉಪಯೋಗಿಸುವ ಎಲ್ಲಾ ಸಿಬ್ಬಂದಿ ವರ್ಗದವರ ಬಳಿ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ ಡಾಂಗಲ್ ಇರಬೇಕು. ಅದನ್ನು ಇ-ಆಡಳಿತ ಕೇಂದ್ರ ಒದಗಿಸುತ್ತದೆ. ಇ-ಆಫೀಸ್ನ ಅನುಷ್ಠಾನದ ಮೇಲ್ವಿಚಾರಣೆಗಾಗಿ ಸಚಿವಾಲಯದ ಉಪ ಕಾರ್ಯದರ್ಶಿ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಸಿಬ್ಬಂದಿ ವರ್ಗದವರಿಗೆ ಇ-ಆಡಳಿತ ಕೇಂದ್ರದಿಂದ ಹಂತ ಹಂತವಾಗಿ ತರಬೇತಿ ನೀಡಲು ದಿನಾಂಕ ನಿಗದಿಪಡಿಸಲಾಗಿದೆ. ಸಿಬ್ಬಂದಿಗೆ ತಮ್ಮ ತಮ್ಮ ಇಲಾಖೆಗೆ ನಿಗದಿಪಡಿಸಿದ ದಿನಾಂಕದಂದು ಹಾಜರಾಗಲು ಸೂಚಿಸಲಾಗಿದೆ. ಇಲಾಖೆ ಮುಖ್ಯಸ್ಥರಿಗೂ ಸಹ ತರಬೇತಿಗೆ ದಿನಾಂಕ ನಿಗದಿಪಡಿಸಿದ್ದು, ಅವರು ಯಾವುದೇ ಸಮಯದಲ್ಲಿ ತರಬೇತಿ ಕೇಂದ್ರಕ್ಕೆ ಹಾಜರಾಗಿ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ವರ್ಷದ ಜನವರಿ 1ರಿಂದ ಇ-ಆಫೀಸ್ ತಂತ್ರಾಂಶವನ್ನು ಒಂದೇ ಬಾರಿಗೆ ಅಳವಡಿಸಿ, ಕಾರ್ಯನಿರ್ವಸಲು ಸರ್ಕಾರ ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ ಅಂತ್ಯದೊಳಗೆ ತರಬೇತಿ ಪೂರ್ಣಗೊಳಿಸಿ ಸಂಪೂರ್ಣ ಸಿದ್ಧರಾಗಿರುವಂತೆ ಎಲ್ಲಾ ಇಲಾಖೆಗಳ ಸಿಬ್ಬಂದಿಗೆ ಸೂಚಿಸಲಾಗಿದೆ.