ಬೆಂಗಳೂರು, ಸೆ.25-ವಿಧಾನಸಭೆಯಿಂದ ವಿಧಾನಪರಿಷತ್‍ನ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಚ್.ಎಂ.ರಮೇಶ್‍ಗೌಡ ಪ್ರಮಾಣ ಪತ್ರದಲ್ಲಿ ವಾಸ್ತವಾಂಶಗಳನ್ನು ಉಲ್ಲೇಖಿಸಿಲ್ಲ ಎಂದು ಆರ್‍ಟಿಐ ಕಾರ್ಯಕರ್ತ ಚಂದ್ರಶೇಖರ್ ಆರೋಪಿಸಿದರು.
ವಿಧಾನಪರಿಷತ್ ಚುನಾವಣೆ ಚುನಾವಣಾಧೀಕಾರಿಯಾಗಿರುವ ಎಂ.ಎಸ್.ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಅಭ್ಯರ್ಥಿ ರಮೇಶ್‍ಗೌಡ ವಿರುದ್ಧ ಆಕ್ಷೇಪಣೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೆಕ್‍ಬೌನ್ಸ್ ಸೇರಿದಂತೆ ರಮೇಶ್‍ಗೌಡ ವಿರುದ್ಧ ಕ್ರಿಮಿನಲ್ ಕೇಸ್‍ಗಳಿದ್ದರೂ ಕೂಡ ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಆ ಮಾಹಿತಿಯನ್ನು ನೀಡಿಲ್ಲ. ಅಲ್ಲದೆ, ಇತ್ತೀಚಿನ ಆದಾಯ ತೆರಿಗೆ ಅವಧಿಯ ಮಾಹಿತಿಯನ್ನೂ ನೀಡಿಲ್ಲ. ರಮೇಶ್‍ಗೌಡ ಎಂಬ ಹೆಸರಿನಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಆದರೆ ಅವರ ಪಾನ್‍ಕಾರ್ಡ್‍ನಲ್ಲಿ ಎಚ್.ಎಂ.ರಮೇಶ್ ಎಂಬ ಹೆಸರಿದೆ. ಈ ತರದ ವಿಚಾರಗಳನ್ನೊಳಗೊಂಡ ಆಕ್ಷೇಪಣೆಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಅವರು ಸೂಕ್ತ ಕ್ರಮಕೈಗೊಳ್ಳದಿದ್ದರೆ ಮೇಲ್ಮನವಿ ಸಲ್ಲಿಕೆ ಹಾಗೂ ಕಾನೂನು ಹೋರಾಟ ಮಾಡಲಾಗುವುದು ಎಂದರು.
ರಮೇಶ್‍ಗೌಡ ಅವರು ವಿಧಾನಪರಿಷತ್‍ಗೆ ಆಯ್ಕೆಯಾಗುವುದಕ್ಕೆ ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲೇ ವಿರೋಧವೂ ಕೂಡ ವ್ಯಕ್ತವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.