ವಿಧಾನಪರಿಷತ್ ಉಪಚುನಾವಣೆ: ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳು ಅವಿರೋಧ ಆಯ್ಕೆ: ಫಲಿತಾಂಶ ಮಾತ್ರ ಬಾಕಿ

ಬೆಂಗಳೂರು, ಸೆ.25-ವಿಧಾನಸಭೆಯಿಂದ ವಿಧಾನಪರಿಷತ್‍ನ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳಾಗಿ ನಜೀರ್ ಅಹಮ್ಮದ್, ಎಂ.ಸಿ.ವೇಣುಗೋಪಾಲ್ ಹಾಗೂ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿ ಎಚ್.ಎಂ.ರಮೇಶ್‍ಗೌಡ ಅವರು ಸಲ್ಲಿಸಿದ್ದ ನಾಮಪತ್ರಗಳು ಅಂಗೀಕಾರಗೊಂಡು ಅವಿರೋಧವಾಗಿ ಆಯ್ಕೆಯಾಗಿದ್ದು ಫಲಿತಾಂಶ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ.

ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗದ ಟಿ.ಡಿ.ಆರ್.ಹರಿಶ್ಚಂದ್ರಗೌಡ ಹಾಗೂ ವಿಜಯಪುರ ಜಿಲ್ಲೆಯ ವೆಂಕಟೇಶ್ವರ ಮಹಾಸ್ವಾಮೀಜಿ ಉರುಫ್ ಕಟಕ ದೊಂಡ ಡಿಸಿ ಸಲ್ಲಿಸಿದ್ದ ನಾಮಪತ್ರಗಳು ತಿರಸ್ಕøತಗೊಂಡಿವೆ.
ಇಂದು ಬೆಳಗ್ಗೆ ವಿಧಾನಪರಿಷತ್‍ನ ಚುನಾವಣಾಧಿಕಾರಿಯಾದ ವಿಧಾನಸಭೆ ಜಂಟಿ ಕಾರ್ಯದರ್ಶಿ ಎಂ.ಎಸ್.ಕುಮಾರಸ್ವಾಮಿ ನಾಮಪತ್ರಗಳನ್ನು ಪರಿಶೀಲನೆ ನಡೆಸಿದರು.

ನಾಮಪತ್ರಗಳ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಂದ ತೆರವಾಗಿದ್ದ ವಿಧಾನಪರಿಷತ್‍ನ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಜೀರ್ ಅಹಮ್ಮದ್ ಸಲ್ಲಿಸಿದ್ದ ನಾಮಪತ್ರ ಕ್ರಮಬದ್ಧವಾಗಿದ್ದು, ಅಂಗೀಕಾರವಾಗಿದೆ. ಆದರೆ ಹರಿಶ್ಚಂದ್ರಗೌಡ ಸಲ್ಲಿಸಿದ್ದ ನಾಮಪತ್ರ ಸೂಚಕರ ಸಹಿ ಇಲ್ಲದ ಕಾರಣ ತಿರಸ್ಕøತಗೊಂಡಿದೆ ಎಂದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಂದ ತೆರವಾಗಿದ್ದ ವಿಧಾನಪರಿಷತ್‍ನ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಸಿ.ವೇಣುಗೋಪಾಲ್ ಸಲ್ಲಿಸಿದ್ದ ನಾಮಪತ್ರ ಕ್ರಮಬದ್ಧವಾಗಿದೆ. ಅಂಗೀಕೃತಗೊಂಡಿದೆ. ಮಾಜಿ ಸಚಿವ ವಿ.ಸೋಮಣ್ಣ ಅವರಿಂದ ತೆರವಾಗಿದ್ದ ವಿಧಾನಪರಿಷತ್‍ನ ಸದಸ್ಯ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ಎಂ.ರಮೇಶ್‍ಗೌಡ ಸಲ್ಲಿಸಿದ್ದ ನಾಮಪತ್ರ ಕ್ರಮಬದ್ಧವಾಗಿದ್ದು, ಅಂಗೀಕಾರವಾಗಿದೆ. ಆದರೆ ವೆಂಕಟೇಶ್ವರ ಮಹಾಸ್ವಾಮೀಜಿ ಸಲ್ಲಿಸಿದ ನಾಮಪತ್ರದಲ್ಲಿ ಸೂಚಕರ ಹೆಸರು, ಸಹಿ ಇರಲಿಲ್ಲ, ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸದ ಕಾರಣ ತಿರಸ್ಕರಿಸಲಾಗಿದೆ ಎಂದರು.
ವಿಧಾನಪರಿಷತ್ ಮೂರು ಸ್ಥಾನಗಳಿಗೆ ಮೂವರು ಅಭ್ಯರ್ಥಿಗಳು ಮಾತ್ರ ಚುನಾವಣಾ ಕಣದಲ್ಲಿದ್ದಾರೆ. ಸೆ.27 ರಂದು ಮಧ್ಯಾಹ್ನ 3 ಗಂಟೆಯವರೆಗೂ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ. ಆನಂತರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ