ಬೆಂಗಳೂರು, ಸೆ.25-ಕಾಂಗ್ರೆಸ್‍ನಲ್ಲಿ ಸದ್ಯ ಈಗ ಬಂಡಾಯದ ಭೀತಿ ತಣ್ಣಗಾಗಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಆಗಬಹುದೆಂಬ ಆತಂಕ ದೂರವಾಗಿದೆ. ಜಾರಕಿ ಹೊಳಿ ಸಹೋದರರ ಭಿನ್ನಮತ ಬಗೆಹರಿದಿದೆ. ಹಾಗಾಗಿ ಇಂದು ಸಂಜೆ ಕರೆದಿರುವ ಶಾಸಕಾಂಗ ಪಕ್ಷದ ಸಭೆಯನ್ನು ಬ್ಲಾಕ್‍ಮೇಲ್ ಮಾಡುವವರನ್ನು ರಿಪೇರಿ ಮಾಡಲು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಬ್ಲಾಕ್‍ಮೇಲ್ ಮಾಡುವ ಮೂಲಕ ಸಚಿವ ಸ್ಥಾನ ಪಡೆಯಲು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಪಡೆಯಲು ಬಂಡಾಯದ ಕಹಳೆ ಊದುವ ಶಾಸಕರ ಕಿವಿ ಹಿಂಡುವ ಕೆಲಸವನ್ನು ಇಂದಿನ ಸಿಎಲ್‍ಪಿ ಸಭೆಯಲ್ಲಿ ಮಾಡಲು ನಾಯಕರು ನಿರ್ಧರಿಸಿದ್ದಾರೆ.
ಇಂದು ಸಂಜೆ ಮಾಜಿ ಮುಖ್ಯಮಂತ್ರಿ , ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ಶಾಸಕರಿಗೆ ಬಂಡಾಯದಿಂದಾಗುವ ಪರಿಣಾಮದ ಬಗೆಗಿನ ಪಾಠವನ್ನು ಹೇಳಲಿದ್ದಾರೆ. ಸಾಮಾನ್ಯವಾಗಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗುತ್ತದೆ. ಆದರೆ ಬೆಳಗಾವಿ ಕಾಂಗ್ರೆಸ್‍ನ ಭಿನ್ನಮತ, ಸಚಿವಾಕಾಂಕ್ಷಿಗಳು ನಡೆಸಿದ ಬ್ಲಾಕ್‍ಮೇಲ್ ತಂತ್ರ, ವಿಧಾನಪರಿಷತ್ ಉಪಚುನಾವಣೆಯಲ್ಲಿ ಅಡ್ಡಮತದಾನವಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಈಗ ಎಲ್ಲಾ ಆತಂಕಗಳು ದೂರವಾಗಿವೆ. ಆದರೂ ಕೆಲ ಶಾಸಕರು ತಮ್ಮ ಚಾಳಿಯನ್ನು ಬಿಟ್ಟಿಲ್ಲ. ವಿಧಾನಪರಿಷತ್ ಉಪಚುನಾವಣೆಯಲ್ಲಿ ಬಿಜೆಪಿ ಅಡ್ಡ ಮತದಾನ ಮಾಡಲು ಪ್ರಯತ್ನ ನಡೆಸಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮುನ್ನವೇ ಶಸ್ತ್ರತ್ಯಾಗ ಮಾಡಿತ್ತು.
ತಮ್ಮ ಪಕ್ಷದವರೇ ಎಲ್ಲಿ ಅಡ್ಡ ಮತದಾನ ಮಾಡುತ್ತಾರೋ ಎಂಬ ಆತಂಕದಿಂದ ಹಿಂದೆ ಸರಿದಿತ್ತು. ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕೆ ಕೆಟ್ಟ ಹೆಸರು ಬರಬಾರದು ಎಂಬ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿತ್ತು. ಬಿಜೆಪಿಯ ಈ ಬೆಳವಣಿಗೆಯಿಂದ ಆ ಪಕ್ಷದವರೊಂದಿಗೆ ಸೇರಿ ತಂತ್ರ ನಡೆಸಲು ಮುಂದಾಗಿದ್ದವರು ಈಗ ತಣ್ಣಗಾಗಿದ್ದಾರೆ. ಬಿಜೆಪಿಯವರೇ ಯಾವುದೇ ಪ್ರಯತ್ನ ಮಾಡದೆ ಸುಮ್ಮನಾಗಿರುವುದರಿಂದ ನಾವೇನು ಮಾಡಲು ಸಾಧ್ಯ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‍ನ ಕೆಲ ಶಾಸಕರು ತಣ್ಣಗಾಗಿರುವ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆ ತೀವ್ರ ಕುತೂಹಲ ಪಡೆದಿದೆ.
ಶಾಸಕಾಂಗ ಪಕ್ಷದ ನಾಯಕರೂ ಸಹ ಕಬ್ಬಿಣ ಕಾದಾಗಲೇ ಬಡಿಯಬೇಕು ಎಂಬ ಆಲೋಚನೆಯಲ್ಲಿ ಇದ್ದಂತಿದೆ. ಅತ್ತ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಿ ತನ್ನ ಒಗ್ಗಟ್ಟು ಪ್ರದರ್ಶಿಸಿದೆ. ಇತ್ತ ಕಾಂಗ್ರೆಸ್ ಕೂಡ ಇಂದು ಶಾಸಕಾಂಗ ಪಕ್ಷದ ಸಭೆ ನಡೆಸಿ ತನ್ನ ಒಗ್ಗಟ್ಟು ಪ್ರದರ್ಶಿಸುವುದರ ಜೊತೆಗೆ ಭಿನ್ನಮತ ಮರುಕಳಿಸದಂತೆ ಎಚ್ಚರಿಸುವುದರೊಂದಿಗೆ ಲೋಕಸಭೆ ಚುನಾವಣೆಗೆ ಸಜ್ಜಾಗುವ ಸಂದೇಶ ನೀಡಲಿದೆ.