ಬೆಂಗಳೂರು,ಸೆ.25- ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ರಾಜ ಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿಸಿಎಂ ಪರಮೇಶ್ವರ್ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಬಂದಿರುವುದರಿಂದ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿವೆ. ಸಮಸ್ಯೆಗಳನ್ನು ನಿವಾರಿಸಲು ವಲಯವಾರು ಸಮಿತಿಗಳನ್ನು ರಚಿಸಿದ್ದೇವೆ. ಯುದ್ಧೋಪಾದಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದೇವೆ. ರಾಜಕಾಲುವೆ ಒತ್ತುವರಿಯಿಂದ ಕೆಲವು ಕಡೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಜೊತೆಗೆ ಅಲ್ಲಲ್ಲಿ ಕಸ ಮತ್ತು ಪ್ಲಾಸ್ಟಿಕ್ ಪೇಪರ್ ಸಿಕ್ಕಿಕೊಂಡು ನೀರು ನಿಲ್ಲುತ್ತಿದೆ. ಈ ರೀತಿಯ ಅಡೆತಡೆಗಳನ್ನು ನಿವಾರಿಸುವಂತೆಯೂ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ರಸ್ತೆಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಕ್ರಮ ಕೈಗೊಂಡಿದೆ. ಮಳೆ ಸುರಿದಿದ್ದರಿಂದ ಕಾಮಗಾರಿಗೆ ಅಡ್ಡಿಯಾಗಿದೆ. ಮಳೆ ನಿಂತ ಮೇಲೆ ಮತ್ತೆ ಕೆಲಸ ಮುಂದುವರೆಸುತ್ತೇವೆ. ಹೈಕೋರ್ಟ್ ಆದೇಶ ಪಾಲನೆಗೆ ಸರ್ಕಾರ, ಬಿಬಿಎಂಪಿ ಬದ್ದವಾಗಿದೆ ಎಂದು ಅವರು ಹೇಳಿದರು.
ಶಾಸಕರ ಜತೆ ಚರ್ಚಿಸಿ ಮೇಯರ್ ಆಯ್ಕೆ:
ಇದೇ 28ರಂದು ಬಿಬಿಎಂಪಿ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಆ ಸಂಬಂಧವಾಗಿ ಚರ್ಚಿಸಲು ನಾಳೆ ಬೆಂಗಳೂರಿನ ಶಾಸಕರ ಸಭೆ ಕರೆದಿದ್ದೇವೆ. ಅಲ್ಲಿ ಮೇಯರ್ ಆಯ್ಕೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಜೆಡಿಎಸ್ ಮೇಯರ್ ಸ್ಥಾನ ಬಿಟ್ಟುಕೊಡುವಂತೆ ಬೇಡಿಕೆ ಇಟ್ಟಿರುವುದು ನನ್ನ ಗಮನಕ್ಕೆ ಬಂದಿಲ್ಲ. ನಾವು ಎಲ್ಲಾ ಶಾಸಕರು ಮತ್ತು ಬಿಬಿಎಂಪಿ ಸದಸ್ಯರ ಜೊತೆ ಚರ್ಚೆ ಮಾಡಿ ಒಮ್ಮತದ ಮೇಯರ್ನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.
ಬಂಡಾಯ ಶಾಸಕರ ಬಗ್ಗೆ ಹೈಕಮಾಂಡ್ ತೀರ್ಮಾನ:
ಸಮ್ಮಿಶ್ರ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಕೆಲವು ಸಣ್ಣಪುಟ್ಟ ಒತ್ತಡಗಳು ಇವೆ. ಇದನ್ನೇ ದೊಡ್ಡದು ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಶಾಸಕರ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ಪರಮೇಶ್ವರ್ ತಿಳಿಸಿದರು.
ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿದೆ. ಅಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಲೋಕಸಭೆ ಚುನಾವಣೆ ವಿಷಯಗಳ ಕುರಿತು ಚರ್ಚಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.