ಬೆಂಗಳೂರು, ಸೆ.24- ಕೊನೆ ಕ್ಷಣದಲ್ಲಿ ಬಿಜೆಪಿ ಸ್ಪರ್ಧಾಕಣದಿಂದ ಹಿಂದೆ ಸರಿದಿರುವ ಕಾರಣ ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯಲಿರುವ ಮೂರು ಸ್ಥಾನಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.
ಈಗಾಗಲೇ ಕಾಂಗ್ರೆಸ್ನಿಂದ ವೇಣುಗೋಪಾಲ್ ಹಾಗೂ ನಜೀರ್ ಅಹಮ್ಮದ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ನಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಕೊನೆ ಕ್ಷಣದವರೆಗೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಯಾರೇ ಅಭ್ಯರ್ಥಿಯಾದರೂ ಅವಿರೋಧವಾಗಿ ಆಯ್ಕೆಯಾಗುವುದು ಖಚಿತ.
ಮೂರು ಸ್ಥಾನಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿ ಈ ಮೊದಲು ತೀರ್ಮಾನಿಸಿದಂತೆ ಮಾಜಿ ಶಾಸಕರಾದ ಸಿ.ಪಿ.ಯೋಗೇಶ್ವರ್, ಮಾಲೀಕಯ್ಯ ಗುತ್ತೇದಾರ್ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಅವರನ್ನು ಕಣಕ್ಕಿಳಿಸುವ ಬಗ್ಗೆ ವದಂತಿಗಳು ಕೇಳಿ ಬಂದಿದ್ದವು.
ಆದರೆ, ಇಂದು ಮಧ್ಯಾಹ್ನ 12 ಗಂಟೆ ನಂತರ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತೀರ್ಮಾನದಿಂದ ಹಿಂದೆ ಸರಿಯಿತು. ಚುನಾವಣೆಯಲ್ಲಿ ಸ್ಪರ್ಧಿಸಿ ಮುಖಭಂಗ ಅನುಭವಿಸುವ ಬದಲು ಹಿಂದೆ ಸರಿಯುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಪಕ್ಷದ ನಾಯಕರು ಬಂದಿದ್ದಾರೆ.
ಶಾಸಕರು ಭಿನ್ನಮತ ಸಾರಿದರೆ, ಇಲ್ಲವೇ ಪರಿಷತ್ ಉಪ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಹೈಕಮಾಂಡ್ ಎಚ್ಚರಿಕೆ ಸಂದೇಶ ರವಾನಿಸಿತ್ತು. ಇದರಿಂದ ತುಸು ಬೆದರಿದ ಶಾಸಕರು ಬೇಲಿ ಹಾರುವ ತೀರ್ಮಾನದಿಂದ ಹಿಂದೆ ಸರಿದಿದ್ದಾರೆ.
ಯಾವಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ತಮ್ಮ ತಮ್ಮ ಪಕ್ಷದ ನಿಲುವಿಗೆ ಬದ್ಧರಾಗಿರುವುದಾಗಿ ಘೋಷಣೆ ಮಾಡಿದರೋ ಯಾವ ಪ್ರಯತ್ನವೂ ಈಡೇರಿವುದಿಲ್ಲ ಎಂಬುದು ಮನವರಿಕೆಯಾಯಿತೋ ಬಿಜೆಪಿ ಸ್ಪರ್ಧೆಯಿಂದ ಹಿಂದೆ ಸರಿಯಿತು.
ಆದ್ದರಿಂದಲೇ ಉಪಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಾರದೆಂದು ತೀರ್ಮಾನಿಸಲಾಯಿತು. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಕಣದಲ್ಲಿ ಪಕ್ಷೇತರ ಅಭ್ಯರ್ಥಿಗಳು ಇಲ್ಲದಿರುವ ಕಾರಣ ಉಭಯ ಪಕ್ಷಗಳ ಅಭ್ಯರ್ಥಿಗಳೇ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಚುನಾವಣಾಧಿಕಾರಿಯಾದ ವಿಧಾನಸಭೆ ಕಾರ್ಯದರ್ಶಿ ಅಧಿಕೃತವಾಗಿ ಘೋಷಣೆ ಮಾಡುವುದಷ್ಟೇ ಬಾಕಿ ಇದೆ.
ವಿಧಾನಸಭೆಯಿಂದ ವಿಧಾನಪರಿಷತ್ಗೆ ಆಯ್ಕೆಯಾಗಬೇಕಾದರೆ ಒಬ್ಬ ಅಭ್ಯರ್ಥಿ 112 ಮತಗಳನ್ನು ಪಡೆಯಬೇಕು. ಕಾಂಗ್ರೆಸ್-ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಬೆಂಬಲ ನೀಡುತ್ತಿರುವುದರಿಂದ ಅದರ ಸಂಖ್ಯೆ 118. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಒಂದೇ ಒಂದು ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಚುನಾವಣಾ ಆಯೋಗ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಿದ್ದರಿಂದ ಮೂರೂ ಸ್ಥಾನಗಳು ಮೈತ್ರಿ ಪಾಲಾಗಲಿವೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆ.ಎಸ್.ಈಶ್ವರಪ್ಪ ಮತ್ತು ವಿ.ಸೋಮಣ್ಣ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಈ ಸ್ಥಾನಕ್ಕೆ ಅ.4ರಂದು ಉಪ ಚುನಾವಣೆ ನಡೆಯಲಿದೆ.