ರೈತರು ಹಣ ಠೇವಣಿ ಇಟಿದ್ದರೂ ಸಾಲ ಮನ್ನಾ ಪ್ರಯೋಜನ ಲಭ್ಯ

ಬೆಂಗಳೂರು, ಸೆ.24- ಸಹಕಾರಿ ಸಂಸ್ಥೆಗಳಲ್ಲಿ ರೈತರು ಮಾಡಿದ್ದ ಒಂದು ಲಕ್ಷ ರೂ.ವರೆಗಿನ ಬೆಳೆ ಸಾಲ ಮನ್ನಾ ಯೋಜನೆಯಡಿ ವಿಧಿಸಿದ್ದ ಷರತ್ತುಗಳನ್ನು ತಿದ್ದುಪಡಿ ಮಾಡಲಾಗಿದ್ದು, ಬ್ಯಾಂಕಿನಲ್ಲಿ ರೈತರು ಹಣ ಠೇವಣಿ ಇಟಿದ್ದರೂ ಸಾಲ ಮನ್ನಾ ಪ್ರಯೋಜನ ದೊರೆಯಲಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಆದೇಶ ಹೊರಡಿಸಿದ್ದು, ಮಾರ್ಗಸೂಚಿಗಳನ್ನು ಸಹಕಾರಿ ಸಂಸ್ಥೆಗಳಿಗೆ ಕಳುಹಿಸಲಾಗಿದೆ ಎಂದರು.
ಸಾಲ ಮನ್ನಾಕ್ಕೆ ಸಂಬಂಧಿಸಿದ ಹಿಂದಿನ ಆದೇಶದಲ್ಲಿ ಮುದ್ದತು ಠೇವಣಿ ಹೊಂದಿದ್ದರೆ ಅಂತಹ ಮೊತ್ತವನ್ನು ಹೊರ ಬಾಕಿಯಲ್ಲಿ ಕಳೆಯತಕ್ಕದ್ದು ಎಂಬ ಷರತ್ತು ಕೈ ಬಿಡಲಾಗಿದೆ ಎಂದರು.

ಹಿಂದಿನ ಸರ್ಕಾರ ಸಹಕಾರಿ ಸಂಸ್ಥೆಗಳ 8165 ಕೋಟಿ ರೂ. ಸಾಲ ಮನ್ನಾ ಮಾಡಿ ಅವರ 2500 ಕೋಟಿ ಮನ್ನಾದ ಬಾಕಿ ಪಾವತಿಸಲಾಗಿದೆ. ಇತ್ತೀಚೆಗೆ 1495 ಕೋಟಿ ರೂ. ಸಾಲ ಮನ್ನಾ ಮಾಡಲು ಸಹಕಾರಿ ಸಂಸ್ಥೆ ಸಾಲ ಮನ್ನಾಕ್ಕೆ ಸಂಬಂಧಿಸಿದ ಬಿಲ್ಲುಗಳನ್ನು ಕ್ಲೈಮ್ ಮಾಡಲು ಆಯಾ ಸಂಸ್ಥೆ ಹಾಗೂ ಬ್ಯಾಂಕುಗಳು ಸರ್ಕಾರಕ್ಕೆ ಸಲ್ಲಿಸಬೇಕು.

ಆ ಬಿಲ್ಲುಗಳನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿ ಸಾಲ ಮನ್ನಾ ಕ್ರಮ ಕೈಗೊಳ್ಳಲಾಗುವುದು, ಸಹಕಾರ ಸಂಸ್ಥೆಗಳ 9498 ಕೋಟಿ ರೂ. ಮನ್ನಾ ಮಾಡಲು ತೀರ್ಮಾನಿಸಿದ್ದು, ಕಳೆದ ಜು.10ರವರೆಗಿನ ಎಲ್ಲಾ ಬೆಳೆ ಸಾಲವನ್ನು ಒಂದು ಲಕ್ಷ ರೂ.ವರೆಗೆ ಮನ್ನಾ ಮಾಡಲಿದೆ.
ಜುಲೈ ಮತ್ತು ಆಗಸ್ಟ್ ತಿಂಗಳ ಸಾಲ ಮನ್ನಾ ಮಾಡಬೇಕಾದ ಪ್ರಮಾಣ 317 ಕೋಟಿ ರೂ. ಆಗಲಿದೆ. ಸೆಪ್ಟೆಂಬರ್ 236 ಕೋಟಿ ರೂ. ಆಗಲಿದೆ. ಫೆಬ್ರವರಿಯಲ್ಲಿ 1100 ಕೋಟಿ ರೂ. ಮಾರ್ಚ್‍ನಲ್ಲಿ ಎರಡು ಸಾವಿರ ಕೋಟಿ, ಮೇ 1700 ಕೋಟಿ, ಜೂನ್ 1500 ಕೋಟಿ ರೂ. ಸಾಲ ಮನ್ನಾ ಹಣ ಸರ್ಕಾರ ಬಿಡುಗಡೆ ಮಾಡಬೇಕಾಗುತ್ತದೆ.

2019ರ ಜುಲೈ ವೇಳೆಗೆ ಸಹಕಾರಿ ಸಂಸ್ಥೆಗಳ ಸಂಪೂರ್ಣ ಸಾಲ ಮನ್ನಾವಾಗಲಿದೆ. ದಸರಾ, ದೀಪಾವಳಿ ನಡುವಿನ ಅವಧಿಯಲ್ಲಿ ಋಣಮುಕ್ತ ಪ್ರಮಾಣ ಪತ್ರ ನೀಡಲಾಗುವುದು. ಸುಮಾರು 22 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆಯಲಿದೆ.
ಕಳೆದ ಸರ್ಕಾರ ಮತ್ತು ಸಾಲ ಮನ್ನಾ ಮಾಡಿದ ಒಟ್ಟು ಪ್ರಮಾಣ 17 ಸಾವಿರ ಕೋಟಿಯಾಗಲಿದೆ. ಇನ್ನೊಂದು ವರ್ಷದಲ್ಲಿ ಹೊಸದಾಗಿ 15 ಲಕ್ಷ ರೈತರನ್ನು ಸಹಕಾರಿ ಸಂಸ್ಥೆಗಳ ಬೆಳೆ ಸಾಲದ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. 30 ಸಾವಿರ ಕೋಟಿ ವರೆಗಿನ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾಕ್ಕೂ ಚಾಲನೆ ದೊರೆತಿದೆ ಎಂದರು.

ರೈತರ ಉಳಿತಾಯ ಖಾತೆಗೆ ಸಾಲ ಮನ್ನಾ ಹಣ ಜಮಾ ಮಾಡಲಾಗುತ್ತದೆ. ಡಿಸಿಸಿ ಬ್ಯಾಂಕುಗಳು ಈ ಸಾಲ ಮನ್ನಾದ ಮೊತ್ತವನ್ನು ರೈತರ ಸಾಲದ ಖಾತೆಗೆ ಕೂಡಲೇ ವರ್ಗಾಯಿಸಬೇಕು. ವೇತನದಾರರು, ಪಿಂಚಣಿದಾರರು ಆದಾಯ ತೆರಿಗೆ ಪಾವತಿದಾರರಿಂದ ಸ್ವಯಂ ಘೋಷಣೆ ಪತ್ರ ಪಡೆದು ಸಾಲ ಮನ್ನಾ ಯೋಜನೆ ಜಾರಿಗೊಳಿಸಲಾಗುವುದು.
ಸಹಕಾರಿ ಸಂಘಗಳ ಸಾಲ ಮೊತ್ತ ಕ್ಲೈಮ್ ಮಾಡಲು ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದು ಸರಳವಾದ ಮಾನಸೂಚಿಯನ್ನು ಸಂಬಂಧಿಕರು ನೀಡುತ್ತಾರೆ ಎಂದು ವಿವರಿಸಿದರು.

ವರದಿಗೆ ಸೂಚನೆ:
ಮಂಡ್ಯದಲ್ಲಿ ಇತ್ತೀಚೆಗೆ ರೈತ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವುದು ನೋವು ತಂದಿದೆ. ವರದಿ ನೀಡಲು ಜಿಲ್ಲಾ ಮಟ್ಟದ ಸಹಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಸಂಜೆ ವೇಳೆಗೆ ವರದಿ ಬರುವ ನಿರೀಕ್ಷೆ ಇದೆ. ಲೇವಾದೇವಿದಾರರಿಂದ ಕಿರುಕುಳ ವಾಗುತ್ತಿರುವ ಬಗ್ಗೆ ಜಿಲ್ಲಾ ಎಸ್‍ಪಿಗೆ ದೂರು ಕೊಟ್ಟರೆ ಕ್ರಮಕೈಗೊಳ್ಳಲಾಗುವುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ