ಬೆಂಗಳೂರು, ಸೆ.24- ನಗರದಲ್ಲಿ ಸ್ವಂತ ನಿವೇಶನಹೊಂದಬೇಕೆಂಬ ಜನತೆಯ ಬಹುದಿನಗಳ ಕನಸು ನಾಳೆ ನನಸಾಗಲಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ಕೆಂಪೇಗೌಡ ಬಡಾವಣೆಯಲ್ಲಿ ಅಭಿವೃದ್ಧಿಪಡಿಸಿರುವ ಐದು ಸಾವಿರ ನಿವೇಶನಗಳನ್ನು ನಾಳೆ ಫಲಾನುಭವಿಗಳಿಗೆ ಹಂಚಿಕೆಯಾಗಲಿದೆ.
ಒಂದು ಸಾವಿರ ಮಂದಿಗೆ 2್ಡ030, ಎರಡೂವರೆ ಸಾವಿರ ಮಂದಿಗೆ 30×40, 700ಮಂದಿಗೆ 40×60 ಹಾಗೂ 800 ಮಂದಿಗೆ 50×80 ಚದರ ಅಡಿ ನಿವೇಶನಗಳನ್ನು ವಿತರಣೆ ಮಾಡಲಾಗುವುದು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಲಾಟರಿ ಎತ್ತುವ ಮೂಲಕ ಫಲಾನುಭವಿಗಳಿಗೆ ನಿವೇಶನವನ್ನು ಹಂಚಿಕೆ ಮಾಡಲಿದ್ದಾರೆ. ಬೆಳಗ್ಗೆ 11.30ಕ್ಕೆ ಸರಿಯಾಗಿ ಮೊದಲ ಫಲಾನುಭವಿಗೆ ನಿವೇಶನದ ಹಕ್ಕುಪತ್ರವನ್ನು ವಿತರಣೆ ಮಾಡಲಿದ್ದಾರೆ. ಐದು ಸಾವಿರ ನಿವೇಶನ ಹಂಚಿಕೆಯಲ್ಲಿ ಅರ್ಜಿದಾರರ ವಯಸ್ಸು, ಮೀಸಲಾತಿ ನಿಯಮಾವಳಿ, ವಿಕಲಚೇತರಿಗೂ ಸಹ ಆದ್ಯತೆ ನೀಡಲಾಗುವುದು.
ಮೊದಲ ಹಂತದಲ್ಲಿ ಐದು ಸಾವಿರ ನಿವೇಶನಗಳನ್ನು ವಿತರಣೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉಳಿದಿರುವ ನಿವೇಶನಗಳನ್ನು ಹಂತ ಹಂತವಾಗಿ ವಿತರಿಸಲಾಗುವುದು ಎಂದು ಬಿಡಿಎ ತಿಳಿಸಿದೆ.
ತಾತ್ಕಾಲಿಕ ಪಟ್ಟಿಯಲ್ಲಿ 600ಚದರ ಅಡಿ ಹಾಗೂ 1200 ಚದರ ಅಡಿ ವಿಸ್ತೀರ್ಣಗಳ ನಿವೇಶನವನ್ನು ಹಂಚಿಕೆ ಮಾಡಲಾಗುತ್ತದೆ. ಫಲಾನುಭವಿಗಳು ನಿವೇಶನ ಹಂಚಿಕೆಯಾದ 60 ದಿನಗಳೊಳಗೆ ಪೂರ್ಣ ಮೊತ್ತವನ್ನು ಬಿಡಿಎಗೆ ಪಾವತಿಸಬೇಕು. ಅಷ್ಟರೊಳಗೆ ಹಣ ಪಾವತಿಸಲು ಸಾಧ್ಯವಾಗದಿದ್ದರೆ 90ದಿನಗಳ ಕಾಲಾವಕಾಶ ನೀಡಲಾಗಿದೆ.
ಈ ಎರಡು ಅವಧಿಯಲ್ಲಿ ಹಣ ಪಾವತಿಸದಿದ್ದರೆ ಶೇ.21ರ ಬಡ್ಡಿ ದರದಲ್ಲಿ ಪಾವತಿ ಮಾಡಬೇಕು. ಇಲ್ಲದಿದ್ದರೆ ನಿವೇಶನವನ್ನು ರದ್ದು ಪಡಿಸುವ ಅಧಿಕಾರ ಬಿಡಿಎಗೆ ಇದೆ.
ಹಂಚಿಕೆ ಕಾರ್ಯ ಪೂರ್ಣಗೊಂಡ ಬಳಿಕ ಫಲಾನುಭವಿಗಳ ಖಾತೆಗೆ ಆರಂಭಿಕ ಠೇವಣಿ ಮೊತ್ತವನ್ನು ಬಿಡಿಎ ಮರು ಪಾವತಿ ಮಾಡಲಿದೆ. ಈ ಹಿಂದೆ ವಿಧಾನಸಭೆ ಚುನಾವಣೆಗೂ ಮುನ್ನ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ಸರ್ಕಾರ ತೀರ್ಮಾನಿಸಿತ್ತು.
ಆದರೆ, ಹೈಕೋರ್ಟ್ನಲ್ಲಿ ಈ ಪ್ರಕರಣ ಇತ್ಯರ್ಥವಾಗದೆ ಇರುವುದು ಹಾಗೂ ಕೆಂಪೇಗೌಡ ಬಡಾವಣೆ ಪ್ರಕ್ರಿಯೆ ಪೂರ್ಣಗೊಳ್ಳದಿರುವ ಹಿನ್ನೆಲೆಯಲ್ಲಿ ವಿತರಣೆ ಮಾಡುವುದು ವಿಳಂಬವಾಗಿತ್ತು.
ಬಿಡಿಎ ಸರಿಯಾದ ಪರಿಹಾರ ನೀಡಿಲ್ಲ ಎಂದು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈಗ ಎಲ್ಲವೂ ಬಗೆಹರಿದಿರುವುದರಿಂದ ಫಲಾನುಭವಿಗಳಿಗೆ ನಾಳೆಯಿಂದ ನಿವೇಶನ ವಿತರಣೆಯಾಗಲಿದೆ.
ಮೈಸೂರು ಹಾಗೂ ಮಾಗಡಿ ರಸ್ತೆ ನಡುವೆ ಬಿಡಿಎ ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ನಿರ್ಮಿಸಿದ್ದು, ಸುಮಾರು 25 ಸಾವಿರ ನಿವೇಶನವನ್ನ ವಿತರಣೆ ಮಾಡುವ ಗುರಿಯನ್ನು ಇಟ್ಟುಕೊಂಡಿದೆ.