ಆಯುಷ್ಮಾನ್ ಭಾರತ್: ಈ ಐದು ರಾಜ್ಯಕ್ಕೆ ಯಾಕಿಲ್ಲ ಈ ಯೋಜನೆ..?

ನವದೆಹಲಿ: ಐವತ್ತು ಕೋಟಿಗೂ ಹೆಚ್ಚು ಜನರನ್ನು ಗುರಿಯಾಗಿಸಿಕೊಂಡು ಅನುಷ್ಠಾನಗೊಂಡಿರುವ ಕೇಂದ್ರ ಸರ್ಕಾರದ ಅತಿದೊಡ್ಡ ಯೋಜನೆಯಾದ ಆಯುಷ್ಮಾನ್ ಭಾರತ್​​​ಗೆ ನಿನ್ನೆ ಚಾಲನೆ ನೀಡಲಾಗಿದೆ.

ಆದರೆ ಈ ಯೋಜನೆ ದೇಶದ ಎಲ್ಲ ರಾಜ್ಯದಲ್ಲಿ ಲಭ್ಯವಿಲ್ಲ ಎನ್ನುವುದು ವಿಶೇಷ. ಹಾಗಾದರೆ ಇದಕ್ಕೆ ಕಾರಣ ಏನು ಗೊತ್ತಾ..? ಯೋಜನೆ ವ್ಯಾಪ್ತಿಗೆ ಬಾರದ ರಾಜ್ಯ ಯಾವ್ಯಾವುದು ಅನ್ನೋದರ ಮಾಹಿತಿ ಇಲ್ಲಿದೆ..

ತೆಲಂಗಾಣ: ದಕ್ಷಿಣದ ರಾಜ್ಯವಾದ ತೆಲಂಗಾಣ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಭಾಗಿಯಾಗದಿರಲು ಕಾರಣ ಆ ರಾಜ್ಯದ ಆರೋಗ್ಯಶ್ರೀ ಯೋಜನೆ. ಆರೋಗ್ಯಶ್ರೀ ಯೋಜನೆ ಸರಿಸುಮಾರು 80 ಲಕ್ಷ ಕುಟುಂಬ ಫಲಾನುಭವಿಗಳಾಗಿದ್ದು, ಈ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್​ ಯೋಜನೆಯಿಂದ ತೆಲಂಗಾಣ ಸದ್ಯಕ್ಕೆ ಹಿಂದೆ ಸರಿದಿದೆ.
ಒಡಿಶಾ: ಕೇಂದ್ರ ಸರ್ಕಾರ ತಮ್ಮ ರಾಜ್ಯವನ್ನು ನಿರ್ಲಕ್ಷಿಸಿದೆ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಆಯುಷ್ಮಾನ್ ಭಾರತ್​ನಿಂದ ದೂರ ಉಳಿದಿದೆ. ಶನಿವಾರದಂದು ಒಡಿಶಾದಲ್ಲಿ ನಡೆದ ಸಮ್ಮೇಳನ ಒಂದರಲ್ಲಿ ಪ್ರಧಾನಿ ಮೋದಿ ಸಿಎಂ ನವೀನ್ ಪಟ್ನಾಯಕ್ ನಡೆಯನ್ನು ಟೀಕಿಸಿದ್ದರು.
ಕೇರಳ: ಆಯುಷ್ಮಾನ್ ಭಾರತ್​ ಯೋಜನೆಯನ್ನು ದಕ್ಷಿಣ ಮತ್ತೊಂದು ರಾಜ್ಯ ಕೇರಳ ಸಹ ತಿರಸ್ಕರಿಸಿದೆ. ಯೋಜನೆ ಅತ್ಯಂತ ದೊಡ್ಡ ಜೋಕ್ ಎಂದಿರುವ ಕೇರಳ ಹಣಕಾಸು ಸಚಿವ ಥೋಮಸ್ ಐಸಾಕ್, ಈ ಯೋಜನೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾರ್ಯಗತಗೊಳಿಸಿರುವುದನ್ನು ಪ್ರಶ್ನೆ ಮಾಡಿದ್ದಾರೆ.
ದೆಹಲಿ: ಅರವಿಂದ ಕೇಜ್ರಿವಾಲ್ ಯೋಜನೆ ಕುರಿತಾಗಿ ಅತೃಪ್ತಿ ವ್ಯಕ್ತಪಡಿಸಿ ಯೋಜನೆಯಿಂದ ತಮ್ಮ ರಾಜ್ಯವನ್ನು ಹೊರಗಿಟ್ಟಿದ್ದಾರೆ. ಮತ್ತೊಂದು ಬಿಳಿ ಆನೆಯನ್ನು ತಯಾರು ಮಾಡುವ ಯೋಜನೆ ಎಂದು ಕೇಜ್ರಿವಾಲ್ ವ್ಯಂಗ್ಯ ಮಾಡಿದ್ದಾರೆ.
ಪಂಜಾಬ್: ಆಯುಷ್ಮಾನ್ ಭಾರತ್ ಯೋಜನೆ ಪಂಜಾಬ್ ರಾಜ್ಯದ ಎಲ್ಲ ಕುಟುಂಬಗಳಿಗೂ ಒಳಪಡುವುದಿಲ್ಲ ಎನ್ನುವ ಕಾರಣಕ್ಕೆ ಅಮರೀಂದರ್ ಸಿಂಗ್ ಸರ್ಕಾರ ಮೋದಿ ಮಹತ್ವದ ಯೋಜನೆಯಿಂದ ಹಿಂದಕ್ಕೆ ಸರಿದಿದೆ.
ಆಯುಷ್ಮಾನ್ ಭಾರತ್ ಯೋಜನೆಯು ಸಾಮಾನ್ಯ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲಿದೆ. ಎರಡನೇ ಹಾಗೂ ತೃತೀಯ ಹಂತದ ಆರೋಗ್ಯ ಸೇವೆಗಳಿಗಾಗಿ ಪ್ರತಿ ಕುಟುಂಬಕ್ಕೆ 5 ಲಕ್ಷದವರೆಗೆ ಧನ ಸಹಾಯ ಮಾಡಲಾಗುತ್ತದೆ. ಅಲ್ಲದೆ, ಈ ಯೋಜನೆಯು ನಗದು ರಹಿತ ಹಾಗೂ ಕಾಗದ ರಹಿತವಾಗಿ ಫಲಾನುಭವಿಗಳಿಗೆ ದೊರೆಯಲಿದೆ.
ಆರ್ಥಿಕವಾಗಿ ದುರ್ಬಲವಾಗಿರುವ ಮಂದಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಮಹತ್ವದ ಯೋಜನೆ  ಜಾರಿಗೊಳಿಸಿದೆ. ಆಗಸ್ಟ್ 15ರಂದು ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ