ಬೆಂಗಳೂರು, ಸೆ.23-ಬಂಡಾಯ ಶಾಸಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗುತ್ತಿದ್ದಂತೆ ನರಂ ಆದ ಶಾಸಕ ಡಾ.ಸುಧಾಕರ್, ಎಂ.ಟಿ.ಬಿ.ನಾಗರಾಜ್, ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಶಾಸಕ ನಾಗೇಶ್ ಅವರು ತಮ್ಮ ಚೆನ್ನೈ ಪ್ರಯಾಣ ಮೊಟಕುಗೊಳಿಸಿ ಹಿಂತಿರುಗಿದ್ದಾರೆ.
ನಿನ್ನೆ ರಾತ್ರಿ ಸಿದ್ದರಾಮಯ್ಯ ದೂರವಾಣಿ ಮೂಲಕ ಈ ಮೂವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ನಡೆಯಿಂದ ಬೇರೆ ರೀತಿಯ ಸಂದೇಶ ರವಾನೆಯಾಗುತ್ತಿದೆ. ಇತರ ಶಾಸಕರು ನಿಮ್ಮ ರೀತಿಯೇ ನಡೆದುಕೊಂಡರೆ ಹೇಗೆ? ಇದರಿಂದ ಪಕ್ಷಕ್ಕೆ ಮುಜುಗರವಾಗುವುದಿಲ್ಲವೇ? ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿಟ್ಟಿದೆ. ನಿಮ್ಮ ನಡೆ ಬಗ್ಗೆ ಹೈಕಮಾಂಡ್ಗೆ ಏನೆಂದು ಉತ್ತರಿಸಬೇಕು. ನನ್ನ ಮೇಲೆ ಅನುಮಾನ ಮೂಡುವಂತೆ ನಡೆದುಕೊಳ್ಳುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ಪಕ್ಷ ಹಾಗೂ ನಿಮ್ಮ ವರ್ಚಸ್ಸಿಗೆ ಸರಿಯಾದುದಲ್ಲ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸೋಣ. ಮೊದಲು ಹಿಂತಿರುಗಿ ಬನ್ನಿ ಎಂದು ಹೇಳುತ್ತಿದ್ದಂತೆ ಅತೃಪ್ತ ಶಾಸಕರು ತಡಬಡಾಯಿಸಿ ಹಿಂತಿರುಗಿದ್ದಾರೆ.
ಅತೃಪ್ತ ಶಾಸಕರ ಜೊತೆ ಮಾತನಾಡುವಂತೆ ಶಾಸಕ ಜಮೀರ್ ಅಹಮ್ಮದ್ಖಾನ್ಗೆ ಸೂಚಿಸಿದ್ದರಿಂದ ಬೆಳಗ್ಗೆ ಜಮೀರ್ ಅಹ್ಮದ್ ಖಾನ್, ಸುಧಾಕರ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಎಂ.ಟಿ.ಬಿ.ನಾಗರಾಜ್ ಅವರ ಜೊತೆ ಮಾತುಕತೆ ನಡೆಸಿ ಅತೃಪ್ತರ ಮನವೊಲಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹಮ್ಮದ್ಖಾನ್, ಸುಧಾಕರ್ ಅವರು ಕಾಂಗ್ರೆಸ್ಪಕ್ಷ ಬಿಡುವುದಿಲ್ಲ. ಈಗಾಗಲೇ ಅವರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಆದರೆ ಮಾಧ್ಯಮದವರು ಏನೇನೋ ಸೃಷ್ಟಿಸಿದ್ದಾರೆ. ಅವರು ಚೆನ್ನೈಗೆ ಹೋಗಿ ಬಂದಿದ್ದು ನಿಜ. ಆದರೆ ಅವರು ದೇವಸ್ಥಾನಕ್ಕೆ ಹೋಗಿದ್ದರು ಎಂದು ಹೇಳಿದರು.