ಬೆಂಗಳೂರು, ಸೆ.23- ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಾಂಗ್ರೆಸ್ ನೇರವಾಗಿ ಜನರಿಂದ ಹಣ ಸಂಗ್ರಹಿಸಲು ಮುಂದಾಗಿದೆ. ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಅಕ್ಟೋಬರ್ 2ರಿಂದ ನವೆಂಬರ್ 19ರವರೆಗೆ ಜನಸಂಪರ್ಕ ಯಾತ್ರೆಗಳನ್ನು ಆಯೋಜಿಸಲಾಗಿದೆ.
ಈ ಯಾತ್ರೆಯಲ್ಲಿ ಬೂತ್ ಮಟ್ಟದ ಹತ್ತು ಕಾರ್ಯಕರ್ತರನ್ನು ಗುರುತಿಸಿ ಮನೆ ಮನೆಗೆ ಕಾರ್ಯಕರ್ತರನ್ನು ಕಳುಹಿಸಿ ಕಾಂಗ್ರೆಸ್ ಸಂಘಟನೆಯ ಬಗ್ಗೆ, ಕೇಂದ್ರ ಸರ್ಕಾರದ ವೈಪಲ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದು. ಜೊತೆಗೆ ಕಾಂಗ್ರೆಸ್‍ಗೆ ದೇಣಿಗೆ ನೀಡುವಂತೆ ಮನವಿ ಮಾಡಲಾಗುವುದು.
ಪ್ರತಿ ಬೂತ್‍ಗೂ ಕನಿಷ್ಟ 10 ಸಾವಿರ ರೂ. ಸಂಗ್ರಹಿಸುವ ಗುರಿ ನೀಡಲಾಗಿದೆ. ಅದರಲ್ಲಿ ಎಐಸಿಸಿಗೆ ಶೇ.50, ಬ್ಲಾಕ್‍ಗೆ ಶೇ.30, ಜಿಲ್ಲಾ ಮತ್ತು ರಾಜ್ಯ ಕಾಂಗ್ರೆಸ್ ತಲಾ ಶೇ.15ರಷ್ಟು ಹಣ ಹಂಚಿಕೆಯಾಗುತ್ತದೆ ಎಂದು ಕೆಪಿಸಿಸಿ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
ಪಕ್ಷವನ್ನು ಸದೃಢಗೊಳಿಸುವ ಜೊತೆಗೆ ಹಣ ಸಂಗ್ರಹಣೆಯ ಮೂಲಕ ಬ್ಲಾಕ್ ಕಾಂಗ್ರೆಸ್‍ನ್ನು ಸ್ವಂತ ಶಕ್ತಿಯ ಮೇಲೆ ಸಂಘಟನೆ ಮಾಡಲು ಉತ್ತೇಜಿಸಲಾಗುವುದು ಎಂದು ಖಾಸಗಿ ಹೋಟೆಲ್‍ನಲ್ಲಿ ನಡೆದ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ ರಫಾಯಲ್ ಯುದ್ದ ವಿಮಾನ ಖರೀದಿಯ ಕುರಿತು ಪ್ರಸ್ತಾಪಿಸಿದ ಅವರು, ಇದೊಂದು ದೊಡ್ಡ ಹಗರಣ. ತಮ್ಮ ಆಪ್ತರಿಗೆ ಲಾಭ ಮಾಡಿಕೊಡಲು ಪ್ರಧಾನ ಮಂತ್ರಿ ಯುದ್ಧವಿಮಾನ ಖರೀದಿ ಗುತ್ತಿಗೆಯನ್ನು ಅನಿಲ್ ಅಂಬಾನಿ ಒಡೆತನದ ಕಂಪೆನಿಗೆ ಗುತ್ತಿಗೆ ನೀಡಿದ್ದಾರೆ. ತಮ್ಮ ಆಪ್ತರನ್ನು ರಕ್ಷಣೆ ಮಾಡಲು ಮೋದಿ ರಫಾಯಲ್ ಬಗ್ಗೆ ಮಾತನಾಡದೆ ಮೌನವಾಗಿದ್ದಾರೆ. ಹಿಂದೆ 2 ಜಿ, 3 ಜಿ, ಕಲ್ಲಿದ್ದಲು ವಿಷಯದಲ್ಲಿ ಬಿಜೆಪಿ ಸಿಬಿಐ, ಜಂಟಿ ಸದನ ಸಮಿತಿ, ನ್ಯಾಯಾಂಗ ತನಿಖೆಗೆ ಒತ್ತಾಯಿಸಿತ್ತು. ಈಗ ರಫಾಯಲ್ ವಿಷಯದಲ್ಲಿ ಮೌನವಾಗಿರುವುದು ಏಕೆ. ಅವ್ಯವಹಾರ ನಡೆದಿಲ್ಲ ಎನ್ನುವುದಾದರೆ ತನಿಖೆಗೆ ಯಾಕೆ ಮೋದಿ ಹೆದರುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಹಗರಣದಲ್ಲಿ ಮೋದಿ ಬಾಗಿಯಾಗಿದ್ದಾರೆ. ಅವರು ಅಧಿಕಾರದಲ್ಲಿ ಮುಂದುವರೆಯುವ ನೈತಿಕತ ಉಳಿಸಿಕೊಂಡಿಲ್ಲ. ಇನ್ನೊಂದೆಡೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಬೆಂಗಳೂರಿನ ಎಚ್‍ಎಎಲ್ ಯುದ್ಧ ವಿಮಾನ ತಯಾರಿಸುವ ಸಾಮಥ್ರ್ಯ ಹೊಂದಿಲ್ಲ ಎಂದು ಹೇಳುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಎಚ್‍ಎಎಲ್‍ಗೆ ಸಾಮಥ್ರ್ಯ ಇಲ್ಲ ಎಂದಾದರೆ 15 ದಿನದ ಹಿಂದಷ್ಟೇ ಸ್ಥಾಪನೆಯಾದ ಅನಿಲ್ ಅಂಬಾನಿ ಕಂಪೆನಿಗೆ ಸಾಮಥ್ರ್ಯ ಇದೆಯೇ ಎಂದು ಪ್ರಶ್ನಿಸಿದರು.
ರಫಾಯಲ್ ಹಗರಣದ ಬಗ್ಗೆ ಈಗಾಗಲೇ ರಾಜ್ಯಾಧ್ಯಂತೆ ಪತ್ರಿಭಟನೆ ನಡೆಸಲಾಗುತ್ತಿದೆ. ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.