ರಾಫೆಲ್ ಯುದ್ದ ವಿಮಾನ ಒಪ್ಪಂದ : ವಿವಾದಕ್ಕೆ ಯುದ್ಧ ವಿಮಾನ ನಿರ್ಮಾಣ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ತೆರೆ ಎಳೆಯುವ ಯತ್ನ

ಪ್ಯಾರಿಸ್: ರಾಫೆಲ್ ಯುದ್ದ ವಿಮಾನ ಒಪ್ಪಂದದ ಕುರಿತು ಭುಗಿಲೆದ್ದಿರುವ ವಿವಾದಕ್ಕೆ ಯುದ್ಧ ವಿಮಾನ ನಿರ್ಮಾಣ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ತೆರೆ ಎಳೆಯುವ ಯತ್ನ ಮಾಡಿದ್ದು, ರಾಫೆಲ್ ಯುದ್ಧ ವಿಮಾನ ಒಪ್ಪಂದಕ್ಕಾಗಿ ಸಹಭಾಗಿ ಸಂಸ್ಥೆಯನ್ನಾಗಿ ರಿಲಯನ್ಸ್ ಸಂಸ್ಥೆಯನ್ನು ಆಯ್ಕೆ ಮಾಡಿದ್ದು ನಾವೇ ಎಂದು ಹೇಳಿದೆ.

ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಲ್ ಹೊಲ್ಯಾಂಡ್ ಅವರ ಹೇಳಿಕೆ ಸಂಬಂಧ ಭುಗಿಲೆದ್ದಿರುವ ವಿವಾದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನಿಡಿರುವ ಡಸ್ಸಾಲ್ಟ್ ಏವಿಯೇಷನ್ ಸಂಸ್ಥೆ, ಸ್ಪಷ್ಟನೆ ನೀಡಿದ್ದು, ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಡಿಫೆನ್ಸ್ ಸಂಸ್ಥೆಯನ್ನು ಆಯ್ಕೆ ಮಾಡಿದ್ದು ನಾವೇ ಎಂದು ಹೇಳಿಕೊಂಡಿದೆ.

ಭಾರತ ಸರ್ಕಾರದೊಂದಿಗಿನ ಒಪ್ಪಂದದ ಅನ್ವಯ ಯುದ್ಧ ವಿಮಾನಗಳ ನಿರ್ಮಾಣಕ್ಕೆ ನಮಗೆ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವ ಬೇಕಿತ್ತು. ಈ ಪೈಕಿ ಉತ್ತಮ ಸಂಸ್ಥೆಗಳ ಹುಡುಕಾಟದಲ್ಲಿದ್ದಾಗ ರಿಲಯನ್ಸ್ ಡಿಫೆನ್ಸ್ ಆಯ್ಕೆ ಉತ್ತಮ ಎನಿಸಿತು. ಇದೇ ಕಾರಣಕ್ಕೆ ಅದೇ ಸಂಸ್ಥೆಯನ್ನುಸಹಭಾಗಿ ಸಂಸ್ಛೆಯನ್ನಾಗಿ ಆಯ್ಕೆ ಮಾಡಿಕೊಂಡೆವು ಎಂದು ಡಸ್ಸಾಲ್ಟ್ ಏವಿಯೇಷನ್ ಸ್ಪಷ್ಟಪಡಿಸಿದೆ.

2017ರಲ್ಲಿ ಉಭಯ ಸಂಸ್ಥೆಗಳೊಂದಿಗೆ ಒಪ್ಪಂದವಾಗಿದ್ದು, ಡಿಸ್ಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್ ಎಂಬ ಜಂಟಿ ಸಂಸ್ಥೆ ಉದಯವಾಗಿದ್ದು, ಉಭಯ ಸಂಸ್ಥೆಗಳು ನಾಗಪುರದಲ್ಲಿ ಉತ್ಪಾದನಾ ಘಟಕವನ್ನು ಹೊಂದಿವೆ. ಇಲ್ಲಿ ಫಾಲ್ತನ್ ಮತ್ತು ರಾಫೆಲ್ ಯುದ್ಧ ವಿಮಾನಗಳನ್ನು ತಯಾರಿಸಲು ಉದ್ದೇಶಿಸಲಾಗಿದೆ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ