ಬೆಂಗಳೂರು, ಸೆ.22- ಕಟ್ಟಡ ಕಲ್ಲು ಗಣಿಗಾರಿಕೆ ಮಾಡುತ್ತಿರುವ ಕ್ರಷರ್ ಮಾಲೀಕರಿಗೆ ಸರ್ಕಾರಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಸಂಚೀವ ಹಟ್ಟಿಹೊಳ ಮಾತನಾಡಿ, ವಿವಿಧ ಕಾಮಗಾರಿಗಳಿಗೆ ಜಲ್ಲಿಯನ್ನು ಪೂರೈಸುವ ಕೆಲಸ ಮಾಡುತ್ತಿದ್ದೇವೆ. ಆದರೆ ಉನ್ನತ ಅಧಿಕಾರಿಗಳು ನಮ್ಮ ಮೇಲೆ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ತಿಳಿಸಿದರು.
ಕಟ್ಟಡದ ಕಲ್ಲು ಮತ್ತು ಎಂ.ಸ್ಯಾಂಡ್ ಖನಿಜಗಳನ್ನು ಸಾಗಾಣಿಕೆ ಮಾಡಲು ಪರ್ಮಿಟ್ ಪಡೆದು ಸಾಗಿಸಲು 1994ರಿಂದಲೂ ಆದೇಶ ಚಾಲ್ತಿಯಲ್ಲಿದ್ದು ಈ ಆದೇಶಕ್ಕೆ ದಂಡ ನಿಗದಿ ಮಾಡಿ ಅನಾವಶ್ಯಕವಾಗಿ ತಿದ್ದುಪಡಿ ಮಾಡುವುದು ಸರಿಯಲ್ಲ ಎಂದರು.
ತಮಗೆ ಬೇಕಾದಂತೆ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ನಮ್ಮನ್ನು ದ್ವಂದ್ವ ಸ್ಥಿತಿಯಲ್ಲಿ ಸಿಲುಕುವಂತೆ ಮಾಡಿದ್ದಾರೆ. ಈ ಹಿಂದೆ ಗಣಿಗಾರಿಕೆಯವರು ಧರಣಿ ಮಾಡಿದ್ದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಈಡೇರಿಸದೇ ಸುಳ್ಳು ಆಶ್ವಾಸನೆ ನೀಡಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳು ತಮ್ಮಿಷ್ಟದಂತೆ ನಿಯಮಗಳಿಗೆ ತಿದ್ದುಪಡಿ ತರುವುದಲ್ಲದೆ ಸುಳ್ಳು ಆರೋಪಗಳನ್ನು ನಮ್ಮ ಉದ್ಯಮದ ಮೇಲೆ ಹೊರಿಸಿದ್ದಾರೆ. ಈ ಹಿಂದೆ ಗಡಿ ಗುರುತನ್ನು ಪರಿಶೀಲಿಸದ ಅಧಿಕಾರಿಗಳೇ ಇಂದು ಗಡಿ ಗುರುತು ಮಾಡಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ನಾವು ಸರ್ಕಾರ ಆದೇಶಗಳಂತೆಯೇ ಉದ್ಯಮ ನಡೆಸುತ್ತಿದ್ದೇವೆ. ಸುರಕ್ಷತಾ ಕ್ರಮಗಳನ್ನು ಮೀರಿ ಯಾವುದೇ ಕಲ್ಲು ಗಣಿಗಾರಿಕೆ ನಡೆಸಿಲ್ಲ ಎಂದರು.
ಹಾಗೆಯೇ ಸರ್ಕಾರದ ಅನುಮತಿ ಮೀರಿ ಹೆಚ್ಚಿನ ಪ್ರಮಾಣದ ಗಣಿಗಾರಿಕೆಯನ್ನು ನಡೆಸಿಲ್ಲ ಮತ್ತು ಯಾವುದೇ ಉಪಖನಿಜವನ್ನು ಹೊರದೇಶಗಳಿಗೆ ರಫ್ತು ಮಾಡಿಲ್ಲ. ಆದರೆ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿರುವುದ ಸರಿಯಲ್ಲ . ಇದರ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವರಾದ ರಾಜಶೇಖರ ಪಾಟೀಲ್ ನಮಗೆ ಆದಷ್ಟು ಬೇಗ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.