ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಮಹತ್ವದ ಮಾತುಕತೆ

ಬೆಂಗಳೂರು,ಸೆ.22- ಆಪರೇಷನ್ ಕಮಲದ ಆಸೆ ಕೈಗೂಡದಿದ್ದರೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ನಿವಾಸದಲ್ಲಿ ಇಂದು ಕೂಡ ಮಹತ್ವದ ಮಾತುಕತೆ ನಡೆಸಲಾಯಿತು.

ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ ಯಡಿಯೂರಪ್ಪನವರೊಂದಿಗೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಸಿ.ಸಿ.ಪಾಟೀಲ್, ಎಂ.ಪಿ.ರೇಣುಕಾಚಾರ್ಯ, ವಿಧಾನಪರಿಷತ್ ಸದ್ಯಸ ಆಯನೂರು ಮಂಜುನಾಥ್ ಸೇರಿದಂತೆ ಮತ್ತಿತರ ಕೆಲವರು ರಹಸ್ಯವಾಗಿ ಮಾತುತಕೆ ನಡೆಸಿದರು.
ಬಿಎಸ್‍ವೈ ಅವರ ನಿವಾಸಕ್ಕೆ ಕಳೆದ ಮೂರು ದಿನಗಳ ಹಿಂದೆ ಬರುತ್ತಿದ್ದ ನಾಯಕರ ಸಂಖ್ಯೆ ಇಂದು ಕಡಿಮೆಯಾಗಿತ್ತು. ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಮುಖಂಡರು ಸೇರಿದಂತೆ ಮತ್ತಿತರರು ತಮ್ಮ ತಮ್ಮ ಸ್ವಕ್ಷೇತ್ರಗಳಿಗೆ ಮರಳಿದ್ದಾರೆ.

ನಗರದಲ್ಲಿ ಉಳಿದಿರುವ ಕೆಲವು ನಾಯಕರು ಮಾತ್ರ ಇಂದು ಧವಳಗಿರಿಯ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿದ್ದಾರೆ.
ಸಭೆಯಲ್ಲಿ ಪ್ರಮುಖವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಹಾಗೂ ಅಸಮಾಧಾನಗೊಂಡಿರುವ ದೋಸ್ತಿ ಪಕ್ಷಗಳ ಶಾಸಕರನ್ನು ಸೆಳೆಯುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗುತ್ತೇವೆ ಎಂದು ಹೇಳಿದ್ದ ಕೆಲ ಶಾಸಕರು ಯಾವ ಕಾರಣಕ್ಕಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದರು, ಪಕ್ಷದ ಚೌಕಟ್ಟಿನಲ್ಲಿ ನಡೆದಿದ್ದ ರಹಸ್ಯ ಮಾತುಕತೆ ಸೋರಿಕೆಯಾಗಲು ಕಾರಣರ್ಯಾರು? ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳು ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಬಿಎಸ್‍ವೈ ತಮ್ಮ ಆಪ್ತರಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ಕೆಲವು ಶಾಸಕರು ಬಂದೇ ಬರುತ್ತೇವೆ ಎಂದು ವಾಗ್ದಾನ ಮಾಡಿದ್ದರು. ಅವರನ್ನು ಕಟ್ಟಿ ಹಾಕಿದ್ದು ಯಾರು? ವಿದೇಶದಿಂದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿಗೆ ಬಂದ ನಂತರ ಉಂಟಾದ ದಿಢೀರ್ ಬದಲಾವಣೆ, ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ದೂರು ದಾಖಲಿಸಿಕೊಂಡಿದ್ದು ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಪಿತೃ ಪಕ್ಷ ಆರಂಭವಾಗುವುದರೊಳಗೆ ಕೆಲ ಶಾಸಕರು ರಾಜೀನಾಮೆ ನೀಡುವ ಭರವಸೆ ನೀಡಿದ್ದರು. ಇದ್ದಕ್ಕಿದ್ದಂತೆ ಅವರು ನಿರ್ಧಾರದಿಂದ ಹಿಂದೆ ಸರಿದಿದ್ದು , ಕಾರ್ಯತಂತ್ರವನ್ನು ರೂಪಿಸುವಲ್ಲಿ ನಾವು ವಿಫಲರಾದವೇ ಹಾಗೂ ಮುಂದೆ ಯಾವ ತಂತ್ರ ಅನುಸರಿಸಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ