ಬೆಂಗಳೂರು, ಸೆ.22- ನಂಬಿದವರೇ ದೂರ ಸರಿಯುತ್ತಿರುವುದರಿಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಿಂದ ಬಿಜೆಪಿ ಹಿಂದೆ ಸರಿಯುವ ಲಕ್ಷಣಗಳು ಗೋಚರಿಸುತ್ತಿದೆ.
ಹೀಗಾಗಿ ಸದ್ಯ ಕೆಲವು ತಿಂಗಳ ಕಾಲ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈ ಹಾಕದೆ ಲೋಕಸಭೆ ಚುನಾವಣೆಯತ್ತ ಗಮನಹರಿಸಲು ಬಿಜೆಪಿ ಮುಂದಾಗಿದೆ.
ಪಕ್ಷಕ್ಕೆ ಗುಡ್ ಬೈ ಹೇಳಿ ಬಂದೇ ಬರುತ್ತೇವೆಂದು ಭರವಸೆ ನೀಡಿದ್ದ ಎರಡೂ ಪಕ್ಷಗಳ ಭಿನ್ನಮತೀಯರು ಸಂಪರ್ಕಕ್ಕೆ ಸಿಗದಿರುವುದರಿಂದ ಬಿಜೆಪಿ ಇಂಥ ಪ್ರಯತ್ನವನ್ನು ಕೈ ಬಿಟ್ಟಿದೆ ಎಂದು ತಿಳಿದುಬಂದಿದೆ.
ಒಂದು ವೇಳೆ ಉಭಯ ಪಕ್ಷಗಳಲ್ಲಿರುವ ಭಿನ್ನಮತೀಯರು ತಾವೇ ಸ್ವಯಂ ಪ್ರೇರಿತರಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಅದು ಆಪರೇಷನ್ ಕಮಲ ಎಂದೇ ಬಿಂಬಿತವಾಗುತ್ತದೆ. ಇದರ ಪರಿಣಾಮ ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಮುಜುಗರವಾಗುವ ಸಾಧ್ಯತೆ ಇದೆ ಎಂದು ಪಕ್ಷದ ವರಿಷ್ಠರು ಎಚ್ಚರಿಕೆ ನೀಡಿದ್ದಾರೆ.
ಕೆಲವು ಭಿನ್ನಮತೀಯ ಶಾಸಕರು ರಾಜೀನಾಮೆ ನೀಡಿ ನಮ್ಮ ಜೊತೆ ಸರ್ಕಾರ ರಚನೆ ಮಾಡಿದರೆ ಕಾಂಗ್ರೆಸ್ ಇದನ್ನು ರಾಷ್ಟ್ರಮಟ್ಟದಲ್ಲಿ ವಿವಾದ ಮಾಡಲು ಸಜ್ಜಾಗಿದೆ. ಕಾಂಗ್ರೆಸ್‍ನ ಈ ಹೋರಾಟಕ್ಕೆ ಕೆಲ ಪ್ರಾದೇಶಿಕ ಪಕ್ಷಗಳು ಕೈ ಜೋಡಿಸಿ ಪುನಃ ಮಹಾಘಟ್ ಬಂಧನ್ ಸಕ್ರಿಯವಾಗುತ್ತದೆ. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವುದನ್ನು ತಳ್ಳಿ ಹಾಕುವಂತಿಲ್ಲ.
ಹೀಗಾಗಿ ಸದ್ಯಕ್ಕೆ ಯಾವ ಆಪರೇಷನ್‍ಗೂ ಬಿಜೆಪಿ ಕೈ ಹಾಕುವುದು ಬೇಡ. ವಿರೋಧ ಪಕ್ಷದಲ್ಲಿ ಕುಳಿತು ಸಕ್ರೀಯವಾಗಿ ಕೆಲಸ ಮಾಡಬೇಕೆಂದು ಕೇಂದ್ರ ವರಿಷ್ಠರು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವರಿಷ್ಠರಿಂದ ಈ ಸೂಚನೆ ಬಂದ ಕಾರಣ ಬಿಜೆಪಿ ಪಾಳೆಯದಲ್ಲಿ ನೀರವ ಮೌನ ಆವರಿಸಿದೆ. ಮೂರು ದಿನಗಳ ಹಿಂದೆ ಶಾಸಕರಲ್ಲಿದ್ದ ಉತ್ಸಾಹ, ಲವಲವಿಕೆ ಕಂಡುಬರುತ್ತಿಲ್ಲ. ಇನ್ನೇನು ಎರಡು ಪಕ್ಷಗಳ ಭಿನ್ನಮತೀಯ ಶಾಸಕರು ಪಕ್ಷಕ್ಕೆ ಬಂದೇ ಬಿಡುತ್ತಾರೆ ಎಂಬ ಅಧಮ್ಯ ಉತ್ಸಾಹದಲ್ಲಿ ಬಿಜೆಪಿ ನಾಯಕರಲ್ಲಿತ್ತು.
ಇದಕ್ಕಾಗಿ ಪೂನಾ ಹಾಗೂ ಪಣಜಿ ಹೊರವಲಯದಲ್ಲಿರುವ ಎರಡು ರೆಸಾರ್ಟ್‍ಗಳನ್ನು ಶಾಸಕರಿಗಾಗಿಯೇ ಕಾಯ್ದಿರಿಸಲಾಗಿತ್ತು. ಆದರೆ ಭಿನ್ನಮತೀಯ ಶಾಸಕರು ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟನೆ ನೀಡುತ್ತಿರುವುದರಿಂದ ಇನ್ನು ತಮ್ಮ ಪ್ರಯತ್ನಗಳು ಕೈಗೂಡುವುದಿಲ್ಲ ಎಂಬುದು ಬಿಜೆಪಿಗೆ ಮನವರಿಕೆಯಾದಂತಾಗಿದೆ.
ಹೀಗಾಗಿ ಬಿಜೆಪಿ ಸದ್ಯಕ್ಕೆ ಯಾವ ಪ್ರಯತ್ನವನ್ನು ನಡೆಸದೆ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ.