ಮೇಯರ್ ಸ್ಥಾನವನ್ನು ಒಕ್ಕಲಿಗ ಸಮುದಾಯದ ಸೌಮ್ಯ ಶಿವಕುಮಾರ್ ಗೆ ನೀಡಲು ಒತ್ತಾಯ

Varta Mitra News

ಬೆಂಗಳೂರು, ಸೆ.22- ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನವನ್ನು ಒಕ್ಕಲಿಗ ಸಮುದಾಯದ ಸೌಮ್ಯ ಶಿವಕುಮಾರ್ ಅವರಿಗೆ ನೀಡಬೇಕೆಂದು ವಿಶ್ವ ಒಕ್ಕಲಿಗರ ಮಹಾವೇದಿಕೆ ಒತ್ತಾಯಿಸಿದೆ.
ಕಳೆದ 22 ವರ್ಷಗಳ ಹಿಂದೆ ಪದ್ಮಾವತಿ ಗಂಗಾಧರ ಗೌಡ ಅವರಿಗೆ ಮೇಯರ್ ಸ್ಥಾನ ಲಭಿಸಿತ್ತು. ಅಂದಿನಿಂದ ಇಂದಿನವರೆಗೂ ಒಕ್ಕಲಿಗ ಜನಾಂಗಕ್ಕೆ ಮೇಯರ್ ಸ್ಥಾನ ಸಿಕ್ಕಿಲ್ಲ. ಮುಂದಿನ ಮೇಯರ್ ಮೀಸಲಾತಿ ಸಾಮಾನ್ಯ ವರ್ಗಕ್ಕೆ ಲಭಿಸಿರುವುದರಿಂದ ಸೌಮ್ಯ ಅವರನ್ನೇ ಮೇಯರ್‍ಯನ್ನಾಗಿ ಆಯ್ಕೆ ಮಾಡಬೇಕೆಂದು ಮಹಾವೇದಿಕೆ ಅಧ್ಯಕ್ಷ ವೈ.ಡಿ.ರವಿಶಂಕರ್ ಪತ್ರಿಕಾಗೋಷ್ಠಿಯಲ್ಲಿಂದು ಆಗ್ರಹಿಸಿದರು.

ನಗರದ ಒಟ್ಟು ಮತದಾರರ ಪೈಕಿ ಶೇ.29.3ರಷ್ಟು ಮಂದಿ ಒಕ್ಕಲಿಗರೇ ಆಗಿದ್ದಾರೆ. ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ. ಹೀಗಾಗಿ ಆ ಜನಾಂಗಕ್ಕೆ ಮೇಯರ್ ಸ್ಥಾನ ನೀಡುವ ಮೂಲಕ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.

ಬೆಂಗಳೂರು ದಕ್ಷಿಣ ಭಾಗದಿಂದ ರೆಡ್ಡಿ ಜನಾಂಗದ ಮಂಜುನಾಥ್ ರೆಡ್ಡಿ, ಹಾಗೂ ಕಮ್ಮಾ ನಾಯ್ಡು ಜನಾಂಗದ ಪದ್ಮಾವತಿ ಮೇಯರ್ ಆಗಿದ್ದಾರೆ. ಉತ್ತರ ಭಾಗದಿಂದ ಎಸ್ಸಿ ಜನಾಂಗದ ಸಂಪತ್‍ರಾಜ್ ಅವರು ಈಗಾಗಲೇ ಮೇಯರ್‍ಗಳಾಗಿ ಅಧಿಕಾರ ಅನುಭವಿಸಿದ್ದಾರೆ. ಆದರೆ ಕೇಂದ್ರ ಪೂರ್ವ ವಿಭಾಗದಿಂದ ಇದುವರೆಗೂ ಯಾರಿಗೂ ಮೇಯರ್ ಪಟ್ಟ ಸಿಕ್ಕಿಲ್ಲ.

ಈ ಅನ್ಯಾಯ ಸರಿಪಡಿಸಲು ಶಾಂತಿನಗರ ವಾರ್ಡ್‍ನಿಂದ ಬಿಬಿಎಂಪಿಗೆ ಆರಿಸಿ ಬಂದಿರುವ ಸೌಮ್ಯ ಶಿವಕುಮಾರ್ ಅವರನ್ನು ಮೇಯರ್ ಆಗಿ ಆಯ್ಕೆ ಮಾಡಬೇಕು ಎಂದು ರವಿಶಂಕರ್ ಕಾಂಗ್ರೆಸ್ ಪಕ್ಷವನ್ನು ಆಗ್ರಹಪಡಿಸಿದರು.
198 ಬಿಬಿಎಂಪಿ ಸದಸ್ಯರಲ್ಲಿ 77 ಮಂದಿ ಒಕ್ಕಲಿಗ ಸದಸ್ಯರಿದ್ದಾರೆ. ಅದೇ ರೀತಿ ನಗರದಲ್ಲಿ ಐವರು ಶಾಸಕರು ಇದ್ದಾರೆ. ಈ ಅಂಶವನ್ನು ಮನಗಾಣಬೇಕು. ಜಿ.ಪದ್ಮಾವತಿ ಅವರು ಮೇಯರ್ ಆಗುವ ಸಂದರ್ಭದಲ್ಲಿ ಸೌಮ್ಯ ಶಿವಕುಮಾರ್ ಅವರು ಮಹಾಪೌರರ ರೇಸ್‍ನಲ್ಲಿದ್ದರು. ಆದರೆ ಪಕ್ಷದ ವರಿಷ್ಠರು ಮುಂದೆ ಅವಕಾಶ ನೀಡುವ ಭರವಸೆ ನೀಡಿ ಪದ್ಮಾವತಿ ಅವರನ್ನು ಮೇಯರ್ ಆಗಿ ಆಯ್ಕೆ ಮಾಡಿದ್ದರು.

ಈಗ ಸೌಮ್ಯ ಶಿವಕುಮಾರ್ ಅವರನ್ನು ಮೇಯರ್ ಆಯ್ಕೆ ಮಾಡಲು ಅವಕಾಶ ಲಭಿಸಿದ್ದು, ಅವರನ್ನೇ ಮಹಾಪೌರರನ್ನಾಗಿ ಆರಿಸಬೇಕು ಎಂಬುದು ಮಹಾವೇದಿಕೆಯ ಆಗ್ರಹವಾಗಿದೆ.

ಮೂಲತಃ ರಾಮನಗರದ ಕೈಲಾಂಚ ಹೋಬಳಿಯ ಲಕ್ಕೋಜನಹಳ್ಳಿಯವರಾಗಿರುವ ಸೌಮ್ಯ ಅವರು ಬೆಂಗಳೂರು ವಿವಿಯಲ್ಲಿ ಎಂಎ ಕನ್ನಡ ವ್ಯಾಸಂಗ ಮಾಡಿದ್ದು, ವಿದ್ಯಾರ್ಥಿ ದೆಸೆಯಿಂದಲೂ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ.
ಕಳೆದ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದಲೇ ಬಿಬಿಎಂಪಿ ಸದಸ್ಯರಾಗಿ ಆರಿಸಿ ಬಂದಿರುವ ಸೌಮ್ಯ ಅವರಿಗೆ ಮೇಯರ್ ಸ್ಥಾನ ನೀಡಿದರೆ ಬೆಂಗಳೂರು ಅಭಿವೃದ್ಧಿಗೆ ಅವರು ಪೂರಕವಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ರವಿಶಂಕರ್ ಭರವಸೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ