ಭಾರತೀಯ ಶಾಸ್ತ್ರೀಯ ಸಂಗೀತದ ಮೂಲ

ಭಾರತೀಯ ಶಾಸ್ತ್ರೀಯ ಸಂಗೀತದ ಮೂಲವು (ಹುಟ್ಟು), ಬಹಳ ಹಳೆಯ ಧರ್ಮ ಗ್ರಂಥ ಹಿಂದೂ ಸಂಪ್ರದಾಯದ ಒಂದು ಭಾಗವಾದ ವೇದದಲ್ಲಿ ಕಂಡು ಬರುತ್ತದೆ. ಇದು ಭಾರತೀಯ ಜನಾಂಗದ ಸಂಗೀತದಿಂದ ಅರ್ಥವತ್ತಾಗಿ ಪ್ರಭಾವಿತಗೊಂಡಿದೆ, ಮತ್ತು ಹಿಂದೂಸ್ಥಾನಿ ಸಂಗೀತವು ಪರ್ಷಿಯಾ ಸಂಗೀತದಿಂದ ಪ್ರಭಾವಿತಗೊಂಡಿದೆ. ನಾಲ್ಕು ವೇದಗಳಲ್ಲಿ ಒಂದಾದ ಸಾಮವೇದವು ಸಂಗೀತವನ್ನು ವಿವರವಾಗಿ ಪರಿಚಯಿಸಿದೆ. ಸಾಮವೇದವು ಋಗ್ವೇದದಿಂದ ರಚಿತವಾಗಿದೆ. ಆದುದರಿಂದ ಇದರ ದೇವರನಾಮವನ್ನು ಸಾಮಗಾನವನ್ನಾಗಿ ಹಾಡಬಹುದು; ಈ ಶೈಲಿಯು ಜತಿಗಳಾಗಿ ಪರಿವರ್ತನೆಗೊಂಡು ಕೊನೆಗೆ ರಾಗಗಳಾಗಿ ಪರಿಣಮಿಸಿತು. ಭಾರತೀಯ ಶಾಸ್ತ್ರೀಯ ಸಂಗೀತ, ಅದರ ಉತ್ಪತ್ತಿಯು (ಹುಟ್ಟು) ಧ್ಯಾನದ ಸಾಧನವಾಗಿದ್ದು ತನ್ನೊಳಗಿನ ಅರಿವನ್ನು ಗಳಿಸುವುದಾಗಿದೆ. ಭರತನ ನಾಟ್ಯ ಶಾಸ್ತ್ರವು, ನಾಟ್ಯ,ಸಂಗೀತ ಮತ್ತುನಾಟಕ ಗಳಿಗೆ ಆಧಾರಭೂತವಾದ (ತತ್ವ) ನಿಯಮಗಳನ್ನು ಹಾಕಿದ ಮೊದಲ ಗ್ರಂಥವಾಗಿದೆ. ಭಾರತೀಯ ಶಾಸ್ತ್ರೀಯ ಸಂಗೀತವು, ಅತ್ಯಂತ ಸಂಕೀರ್ಣ ಮತ್ತು ಸಂಪೂರ್ಣ ರಚನೆಗೊಂಡಿರುವ ಸಂಗೀತದ ವ್ಯವಸ್ಥೆಯಾಗಿದೆ. ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದಂತೆ ಇದು ಆಕ್ಟೇವ್ವನ್ನು 12 ಅರ್ಧ ಶ್ರುತಿಗಳನ್ನಾಗಿ ವಿಭಾಗಿಸಿದಾಗ , ಸ ರಿ ಗ ಮ ಪ ಧ ನಿ ಸ ಎಂಬ 7 ಮೂಲಭೂತ ಸ್ವರಗಳು ಅನುಕ್ರಮವಾಗಿ, ದೋ ರಿ ಮಿ ಫಾ ಸೋಲ್ ಲ ತಿ ದೋ ಎಂಬ ಸ್ಥಾನಗಳಿಗೆ ಪಲ್ಲಟವಾಗುತ್ತದೆ. ಹೀಗಿದ್ದರೂ ಇದನ್ನು ಕೇವಲ ಸ್ವರಭೇದದ ರಾಗದಲ್ಲಿ ಉಪಯೋಗಿಸಲಾಗುತ್ತದೆ, ಇದಕ್ಕೆ ವಿರೋಧವಾಗಿ ಇದನ್ನು ಹೆಚ್ಚು ಆಧುನಿಕ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಸಮ -ಸ್ವಭಾವ ರಾಗದ ರೀತಿಯಲ್ಲಿ ಉಪಯೋಗಿಸಲಾಗುತ್ತದೆ. ಭಾರತೀಯ ಶಾಸ್ತ್ರೀಯ ಸಂಗೀತವು ಸ್ವಭಾವದಲ್ಲಿ ಒಂದೇ ಮಧುರ ದ್ವನಿಯಾಗಿದ್ದು ಮತ್ತು ಒಂದೇ ಮಧುರಎಳೆಯನ್ನು ಸುತ್ತುವರಿದಿದ್ದು, ನಿಗದಿತ ನಾದದಲ್ಲೇ ನುಡಿಸಲಾಗುತ್ತದೆ. ಅಭಿನಯದ ಮಧುರತೆಯು ನಿರ್ದಿಷ್ಟ ರಾಗಗಳು ಮತ್ತು ನಿಯಮಬದ್ಧ ತಾಳಗಳನ್ನು ಆಧರಿಸಿರುತ್ತದೆ.
ಮುಖ್ಯ ಪರಿಕಲ್ಪನೆಗಳು

ಸಪ್ತ ಸ್ವರಗಳು
ಕರ್ನಾಟಕ ಸಂಗೀತದಲ್ಲಿ ಏಳು ಮೂಲ ಸ್ವರಗಳಿವೆ: ಸ-ರಿ-ಗ-ಮ-ಪ-ದ-ನಿ. ಈ ಏಳು ಸ್ವರಗಳ ದೀರ್ಘ ಹೆಸರುಗಳು ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ ಮತ್ತು ನಿಷಾದ. ಸ ಮತ್ತು ಪ ಸ್ವರಗಳನ್ನು ಬಿಟ್ಟರೆ ಉಳಿದವು ಮೂರು ಬೇರೆ ಬೇರೆ ರೂಪಗಳಲ್ಲಿ ಉಂಟಾಗಬಹುದು. ಬದಲಾಗದ ಸ ಮತ್ತು ಪ ಸ್ವರಗಳನ್ನು ಪ್ರಕೃತಿ ಸ್ವರಗಳೆಂದು ಹಾಗೂ ರಿ, ಗ, ಮ, ದ ಮತ್ತು ನಿ ಸ್ವರಗಳನ್ನು ವಿಕೃತಿ ಸ್ವರಗಳೆಂದು ಕರೆಯಲಾಗುತ್ತದೆ. ಸ್ವರ ಸ್ಥಾನಗಳ ಪಟ್ಟಿ ಹೀಗಿದೆ.
ಷಡ್ಜ – ಸ

ಶುದ್ಧ ಋಷಭ – ರಿ೧
ಚತುಶ್ರುತಿ ಋಷಭ – ರಿ೨
ಷಟ್ಶ್ರುತಿ ಋಷಭ – ರಿ೩

ಶುದ್ಧ ಗಾಂಧಾರ – ಗ೧
ಸಾಧಾರಣ ಗಾಂಧಾರ – ಗ೨
ಅಂತರ ಗಾಂಧಾರ – ಗ೩

ಶುದ್ಧ ಮಧ್ಯಮ – ಮ೧
ಪ್ರತಿ ಮಧ್ಯಮ – ಮ೨

ಪಂಚಮ – ಪ

ಶುದ್ಧ ಧೈವತ – ದ೧
ಚತುಶ್ರುತಿ ಧೈವತ – ದ೨
ಷಟ್ಶ್ರುತಿ ಧೈವತ – ದ೩

ಶುದ್ಧ ನಿಷಾದ – ನಿ೧
ಕೈಶಿಕಿ ನಿಷಾದ – ನಿ೨
ಕಾಕಳಿ ನಿಷಾದ – ನಿ೩

ಷಟ್ಶ್ರುತಿ ಋಷಭ ಮತ್ತು ಸಾಧರಣ ಗಾಂಧಾರ ಎರಡು ಸಮನಾದ ಸ್ವರಗಳು ಹಾಗೆಯೆ ಚತುಶ್ರುತಿ ಧೈವತ ಮತ್ತು ಶುದ್ಧ ನಿಷಾದ ಸಮನಾದ ಸ್ವರಗಳು.
ಯಾವುದೇ ಒಂದು ರಾಗದಲ್ಲಿ ಒಂದು ಸ್ವರದ ಒಂದು ರೂಪ ಮಾತ್ರ ಉಂಟಾಗಬಹುದು. ಕೆಲವು “ಹಗುರ” ರಾಗಗಳಲ್ಲಿ (ಉದಾ: ಬೇಹಾಗ್)ಕೆಲವು ಸ್ವರಗಳು ಎರಡು ರೂಪಗಳಲ್ಲಿ ಕಾಣಿಸಿಕೊಳ್ಳಬಹುದು (ಆರೋಹಣದಲ್ಲಿ ಒಂದು ಮತ್ತು ಅವರೋಹಣದಲ್ಲಿ ಒಂದು). ಒಂದು ರಾಗದ ಆರೋಹಣ ಮತ್ತು ಅವರೋಹಣದಲ್ಲಿ ಐದು, ಆರು ಇಲ್ಲವೇ ಏಳು ಸ್ವರಗಳು ಇರಬಹುದು.

ರಾಗ
ರಾಗ ಎಂಬುದು ಶ್ರುತಿಬದ್ಧವಾದ ರಚನೆಯನ್ನು ಸೃಷ್ಟಿಸಲು ಇರುವ ನಿಯಮಗಳ ವ್ಯವಸ್ಥೆ. ಪ್ರತಿ ರಾಗವೂ ಈ ಕೆಳಗಿನ ಅಂಶಗಳನ್ನು ಹೊಂದಿರುತ್ತದೆ.
• ಮೇಲಕ್ಕೇರುವ ಸ್ವರಗಳ ಕ್ರಮ (ಆರೋಹಣ)
• ಕೆಳಗಿಳಿಯುವ ಸ್ವರಗಳ ಕ್ರಮ (ಅವರೋಹಣ)
• ಮುಖ್ಯ ಮತ್ತು ಅಮುಖ್ಯ ಸ್ವರಗಳು
• ಸ್ವರಗಳನ್ನು ಅಲಂಕೃತವಾಗಿರಿಸುವ ಕ್ರಮಗಳು (ಗಮಕ)
..ಇತ್ಯಾದಿ.
ಮೇಳಕರ್ತ ವ್ಯವಸ್ಥೆ
ಆರೋಹಣ ಮತ್ತು ಅವರೋಹಣಗಳಲ್ಲಿ ಏಳೂ ಸ್ವರಗಳನ್ನು ಹೊಂದಿರುವ ರಾಗಗಳನ್ನು ಸಂಪೂರ್ಣ ರಾಗಗಳು ಎಂದು ಕರೆಯಲಾಗುತ್ತದೆ. ಸಂಪೂರ್ಣ ರಾಗಗಳನ್ನು ಮೇಳಕರ್ತ ವ್ಯವಸ್ಥೆಯಲ್ಲಿ ವರ್ಗೀಕರಿಸಲಾಗಿದೆ. ಒಟ್ಟು ೭೨ ಮೇಳಕರ್ತ ರಾಗಗಳಿದ್ದು, ಇವುಗಳಲ್ಲಿ ೩೬ ರಾಗಗಳಲ್ಲಿ ನಾಲ್ಕನೆಯ ಸ್ವರ “ಮ” ಶುದ್ದ ಮಧ್ಯಮವಾಗಿದ್ದು, ಇನ್ನುಳಿದ ೩೬ ಮೇಳಕರ್ತ ರಾಗಗಳಲ್ಲಿ ನಾಲ್ಕನೆಯ ಸ್ವರ “ಮ” ಪ್ರತಿ ಮಧ್ಯಮವಾಗಿರುವುದು(ಮ ಸ್ವರದ ಎರಡನೆಯ ರೂಪ). ಈ ರಾಗಗಳನ್ನು ಆರರ ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಈ ಗುಂಪುಗಳಿಗೆ ಚಕ್ರಗಳೆಂದು ಹೆಸರು. ಹೀಗೆ ಮೇಳಕರ್ತರಾಗಗಳ ೧೨ ಚಕ್ರಗಳಿವೆ.
• ಮೇಳಕರ್ತರಾಗಗಳ ಆರೋಹಣ ಮತ್ತು ಅವರೋಹಣಗಳಲ್ಲಿ ಪ್ರತಿ ಸ್ವರವೂ ಒಂದು ಮತ್ತು ಒಂದೇ ಒಂದು ಬಾರಿ ಕಂಡು ಬರುತ್ತದೆ. ಕೆಲವು ಸ್ವರಗಳು ಇಲ್ಲದೆ ಇರುವ ರಾಗಗಳಿಗೆ ವರ್ಜ್ಯ ರಾಗಗಳೆಂದು ಹೆಸರು. ಮೇಳಕರ್ತ ರಾಗದ ಕೆಲವು ಸ್ವರಗಳನ್ನು ಬಳಸಿಕೊಂಡು, ಕೆಲವನ್ನು ಬಿಟ್ಟು ಇರುವ ರಾಗಗಳಿಗೆ ಜನ್ಯ ರಾಗಗಳು ಎಂದು ಹೆಸರು.
• ಆರೋಹಣ ಮತ್ತು ಅವರೋಹಣಗಳು ವಕ್ರವಾಗಿರುವ ರಾಗಗಳು ಪೂರ್ಣ ರಾಗಗಳಾಗಿದ್ದರೆ ಅವುಗಳಿಗೆ “ವಕ್ರ ಸಂಪೂರ್ಣ” ಎಂದು ಹೆಸರು.

ತಾಳ
ತಾಳ ಎಂಬುದು ಸಂಗೀತ ರಚನೆಗಳ ಲಯವಿನ್ಯಾಸವನ್ನು ನಿರ್ದೇಶಿಸುತ್ತದೆ. ಸಂಗೀತದಲ್ಲಿ ಸಮಯದ ಮೂಲಮಾನಕ್ಕೆ ಮಾತ್ರೆ ಎಂದು ಹೆಸರು. ಸಂಗೀತಗಾರರು ತಮ್ಮ ಕೈಯನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ತಟ್ಟುವುದರ ಮೂಲಕ (ತಾಳ ಹಾಕುವುದು) ಈ ಲಯದ ಲೆಕ್ಕವಿಟ್ಟು ಕೊಳ್ಳುತ್ತಾರೆ. ತಾಳ ಸಮಯದ ಲೆಕ್ಕವನ್ನೂ ಇಟ್ಟುಕೊಳ್ಳಲು ಉಪಯೋಗವಾಗುತ್ತದೆ. ತಾಳಗಳನ್ನು ಏಳು ಗುಂಪುಗಳಾಗಿ ವರ್ಗೀಕರಿಸಲಾಗಿದೆ: ಧ್ರುವ, ಮಠ್ಯ, ರೂಪಕ, ಝಂಪೆ, ತ್ರಿಪುಟ, ಅಟ್ಟ, ಏಕ. ಕರ್ನಾಟಕ ಸಂಗೀತದಲ್ಲಿ ತಾಳವನ್ನು ತೋರಿಸಲು ಸಾಮಾನ್ಯವಾಗಿ ಉಪಯೋಗಿಸುವ ವಾದ್ಯ ಮೃದಂಗ.

ಕೃತಿಗಳು
ಕರ್ನಾಟಕ ಸಂಗೀತದ ಬಹುಪಾಲು ಕೃತಿಗಳು ಕನ್ನಡ ಅಥವಾ ಸಂಸ್ಕೃತ ಭಾಷೆಯಲ್ಲಿವೆ. ತೆಲುಗು ಮತ್ತು ತಮಿಳು ಸಹ ಕೃತಿಗಳ ರಚನೆಯಲ್ಲಿ ಉಪಯೋಗಿಸಲ್ಪಟ್ಟ ಭಾಷೆಗಳು. ಕರ್ನಾಟಕ ಸಂಗೀತದ ಕೃತಿಗಳಲ್ಲಿ ಪ್ರಸಿದ್ಧವಾದ ಕೆಲವೆಂದರೆ-
• ತ್ಯಾಗರಾಜ ವಿರಚಿತ ಪಂಚರತ್ನ ಕೃತಿಗಳು,
• ಮುತ್ತುಸ್ವಾಮಿ ದೀಕ್ಷಿತರು ವಿರಚಿಸಿದ ನವಗ್ರಹ ಕೃತಿಗಳು ಮತ್ತು
• ಜಯದೇವನ ಅಷ್ಟಪದಿಗಳು.
ಕೀರ್ತನೆ
ಕೀರ್ತನೆಗಳು ಸಾಮಾನ್ಯವಾಗಿ ಮೂರು ಭಾಗಗಳನ್ನು ಹೊಂದಿರುತ್ತವೆ:
• ಪಲ್ಲವಿ – ಸಾಮಾನ್ಯವಾಗಿ ಎರಡು ಸಾಲುಗಳು
• ಅನುಪಲ್ಲವಿ – ಸಾಮಾನ್ಯವಾಗಿ ಎರಡು ಸಾಲುಗಳು
• ಚರಣ – ಪಲ್ಲವಿ ಮತ್ತು ಅನುಪಲ್ಲವಿಗಿಂತ ದೀರ್ಘವಾಗಿರುತ್ತದೆ
ಕೆಲವು ಕೀರ್ತನೆಗಳಲ್ಲಿ ಅನುಪಲ್ಲವಿ ಮತ್ತು ಚರಣದ ನಡುವೆ ಚಿಟ್ಟೆಸ್ವರ ಎಂಬ ಭಾಗವಿರುತ್ತದೆ (ಉದಾ: “ಸಾರಸಮುಖಿ ಸಕಲ ಭಾಗ್ಯದೆ…”). ಚಿಟ್ಟೆಸ್ವರದಲ್ಲಿ ಪದಗಳಿಲ್ಲದೆ ಕೇವಲ ಸ್ವರಗಳು ಮಾತ್ರ ಇರುತ್ತವೆ. ಕೆಲವು ಬಾರಿ ಕೃತಿಯನ್ನು ರಚಿಸಿರುವ ವಾಗ್ಗೇಯಕಾರರೇ ಚಿಟ್ಟೆ ಸ್ವರವನ್ನೂ ರಚಿಸಿದ್ದರೆ, ಇನ್ನು ಕೆಲವೆಡೆ ನಂತರ ಬಂದ ಇತರ ಸಂಗೀತ ವಿದ್ವಾಂಸರು ಚಿಟ್ಟೆಸ್ವರವನ್ನು ಸೇರಿಸಿರುವುದೂ ಉಂಟು. ಇನ್ನು ಕೆಲವು ಕೀರ್ತನೆಗಳಲ್ಲಿ ಚರಣದ ನಂತರ ಮಧ್ಯಮ ಕಾಲ ಎಂಬ ಭಾಗವಿರುತ್ತದೆ. ಮಧ್ಯಮ ಕಾಲವನ್ನು ಸಾಮಾನ್ಯವಾಗಿ ದ್ವಿಗುಣ ವೇಗದಲ್ಲಿ ಹಾಡಲಾಗುತ್ತದೆ.

ವರ್ಣ
ವರ್ಣ ಎಂಬುದು ಒಂದು ರಾಗದ ಸಂಪೂರ್ಣ ವರ್ಣನೆಯುಳ್ಳ ವಿಶೇಷ ಕೃತಿ. ಆರೋಹಣ ಮತ್ತು ಅವರೋಹಣ, ಮುಖ್ಯ ಸ್ವರಗಳು, ಸಾಮಾನ್ಯ ಪದಪುಂಜಗಳು ಮೊದಲಾದ ಒಂದು ರಾಗದ ಎಲ್ಲ ಅಂಶಗಳನ್ನೂ ಒಳಗೊಂಡಿರುವ ಕೃತಿ. ವರ್ಣದಲ್ಲಿ ಇರುವ ಭಾಗಗಳೆಂದರೆ ಪಲ್ಲವಿ, ಅನುಪಲ್ಲವಿ, ಮುಕ್ತಾಯಿ ಸ್ವರ (ಕೀರ್ತನೆಯ ಚಿತ್ತಸ್ವರದಂತೆ), ಚರಣ ಮತ್ತು ಚಿಟ್ಟೆಸ್ವರ. ಸಾಹಿತ್ಯವು ಶೃಂಗಾರವಾಗಿರಬಹುದು ಅಥವಾ ಭಕ್ತಿಪ್ರಧಾನವಾಗಿರಬಹುದು.
• ಪೂರ್ವಾ೦ಗ ಮತ್ತು ಉತ್ತರಾಂಗಗಳು ಪ್ರತ್ಯೇಕವಾಗಿದ್ದು, ಪೂರ್ವಾ೦ಗದಲ್ಲಿ ಪಲ್ಲವಿ, ಅನುಪಲ್ಲವಿ, ಚಿಟ್ಟೆಸ್ವರಾಗಳನ್ನು ನಿರೂಪಿಸಿ, ನಂತರ ಪಲ್ಲವಿಯ ಒಂದು ಆವರ್ತವನ್ನು ಹಾಡಿ ಪೂರ್ವಾ೦ಗವನ್ನು ಮುಗಿಸಬೇಕು. ಉತ್ತರಾಂಗದಲ್ಲಿ ಚರಣವನ್ನು ಒಂದಾವರ್ತಿ ನಿರೂಪಿಸಿ, ಎತ್ತುಗಡೆ ಸ್ವರಗಳನ್ನು ಹಾಡಬೇಕು.
• ಪ್ರತಿಯೊಂದು ಎತ್ತುಗಡೆಸ್ವರವನ್ನು ನಿರೂಪಿಸಿದ ನಂತರ ಚರಣ ವನ್ನು ಎತ್ತಿಕೊಳ್ಳಬೇಕು.
• ಕರ್ನಾಟಕ ಸಂಗೀತದಲ್ಲಿ ಉಪಯೋಗಗೊಳ್ಳುವ ಕೃತಿಗಳ ಇತರ ರೂಪಗಳಲ್ಲಿ ಸ್ವರಜತಿ ಮತ್ತು ಗೀತೆಗಳನ್ನು ಹೆಸರಿಸಬಹುದು.

ಮನೋಧರ್ಮ ಸಂಗೀತ
ಸಾಮಾನ್ಯವಾಗಿ ಸಂಗೀತ ಕಛೇರಿಗಳಲ್ಲಿ ಪೂರ್ವ ತಯಾರಿಯಿಲ್ಲದೆ ಸಂಗೀತಗಾರರ ಮನೋಧರ್ಮಕ್ಕನುಗುಣವಾಗಿ ಪರಿಚಯಿಸಲ್ಪಡುವ ಅಂಶಗಳಿರುತ್ತವೆ. ಸರಾಸರಿ ಒಂದು ಕಛೇರಿಯ ಶೇ.೮೦ ಭಾಗ ಈ ರೀತಿಯ ಮನೋಧರ್ಮ ಸಂಗೀತವನ್ನು ಒಳಗೊಂಡಿರುತ್ತದೆ. ನಾಲ್ಕು ಪ್ರಮುಖ ರೀತಿಯ ಮನೋಧರ್ಮ ಸಂಗೀತವನ್ನು ಗುರುತಿಸಲಾಗಿದೆ:
ರಾಗ ಆಲಾಪನೆ
ಇದು ಸಾಮಾನ್ಯವಾಗಿ ಒಂದು ಕೃತಿಯ ಆರಂಭದಲ್ಲಿ ಹಾಡಲಾಗುತ್ತದೆ (ವಾದ್ಯಗಳ ಸಂದರ್ಭದಲ್ಲಿ ನುಡಿಸಲಾಗುತ್ತದೆ). ಇದು ಕೇಳುಗರಲ್ಲಿ ಆ ಕೃತಿಯನ್ನು ಹಾಡಲ್ಪಡುವ ರಾಗದ ಭಾವವನ್ನು ಮೂಡಿಸುವ ಉದ್ದೇಶವನ್ನು ಹೊಂದಿರುತ್ತದೆ. ನಿಧಾನವಾಗಿ ಮುಂದೆ ಸಾಗುವ ಈ ಹಂತ, ತಾಳದ ಬದ್ಧತೆಯಿಲ್ಲದೆ ರಾಗದ ವಿವಿಧ ಗುಣಗಳನ್ನು ಪ್ರದರ್ಶಿಸುತ್ತದೆ. ಆ ರಾಗದ ಜೀವ ಸ್ವರಗಳನ್ನು ಆಧಾರವಾಗಿಟ್ಟುಕೊಂಡು, ವಿವಿಧ ಹಂತಗಳಲ್ಲಿ ವಿಸ್ತರಿಸಲ್ಪಡುತ್ತದೆ. ಸಾಮಾನ್ಯವಾಗಿ ಮಂದ್ರಸ್ಥಾಯಿಯಿಂದ ಆರಂಭವಾಗುವ ಈ ರಾಗ ಪರಿಚಯದ ಪದ್ಧತಿ ಕೆಲಕಾಲ ಅಲ್ಲಿಯೇ ನೆಲೆಸಿ ಅಲ್ಲಿಂದ ಮಧ್ಯಮಸ್ಥಾಯಿಗೆ ಬಂದು ಅಲ್ಲಿ ಪ್ರಕೃತಿ ಸ್ವರವಿದ್ದರೆ ಅದರ ಆಧಾರದ ಮೇಲೆ ಸ್ವಲ್ಪ ಹೊತ್ತು ವಿಶ್ರಮಿಸಿ ಮುಂದೆ ತಾರಸ್ಥಾಯಿಗೆ ಯಾವ ಅಡಚಣೆಯೂ ಇಲ್ಲದೆ ಸುಲಭವಾಗಿ ತೇಲಿದಂತೆ ಮೇಲೇರುತ್ತದೆ. ತಾರಸ್ಥಾಯಿಯಲ್ಲಿ ರಾಗದ ಎಲ್ಲಾ ಗುಣಗಳನ್ನೂ, ರೂಪಗಳನ್ನೂ ಅನಾವರಣಗೊಳಿಸಿ ನಂತರ ಮತ್ತೆ ಮಧ್ಯಮಸ್ಥಾಯಿಗೆ ಬಂದು ಅಲ್ಲಿಂದ ಜಾರಿದಂತೆ ಮಂದ್ರಕ್ಕೆ ಇಳಿಸು ಒಂದು ದೀರ್ಘ ನಿಲುಗಡೆಯೊಡನೆ ನಿಲ್ಲುತ್ತದೆ.
ನೆರವಲ್
ಈ ಹಂತವನ್ನು ಹೆಚ್ಚು ಅನುಭವವುಳ್ಳ ಸಂಗೀತಗಾರರು ಮಾತ್ರ ಉಪಯೋಗಿಸುತ್ತಾರೆ. ಕೃತಿಯ ಯಾವುದಾದರೂ ಒಂದೆರಡು ಸಾಲುಗಳನ್ನು ವಿಧ ವಿಧವಾಗಿ ಪುನಃ ಪುನಃ ಆವರ್ತಿಸಿ ರಾಗ ಮತ್ತು ತಾಳದ ಗುಣಗಳನ್ನು ಮತ್ತು ವಿವಿಧ ಅಲಂಕಾರಗಳನ್ನು ಪ್ರದರ್ಶಿಸಲಾಗುತ್ತದೆ. ಇದು ಪೂರ್ಣ ವಾಗಿ ಸಂಗೀತಗಾರನ ಪ್ರತಿಭೆಯನ್ನು ಪ್ರದರ್ಶಿಸುತ್ತದೆ.
ಕಲ್ಪನಾ ಸ್ವರ
ಎಲ್ಲಕ್ಕಿಂತ ಸರಳ ರೀತಿಯ ಮನೋಧರ್ಮ ಸಂಗೀತ; ಈ ಹಂತದಲ್ಲಿ ಅನೇಕ ಕಲ್ಪನಾ ಸ್ವರಗಳ ಪುಂಜಗಳನ್ನು ಹಾಡಲಾಗುತ್ತದೆ. ಈ ಪುಂಜಗಳಲ್ಲಿ ಸ್ವರಗಳು ಜೋಡಣೆಗೊಳ್ಳುವ ಕ್ರಮ ಆ ರಾಗದ ನಿಯಮಗಳನ್ನು ಅವಲಂಬಿಸಿರುತ್ತದೆ. ಪ್ರತಿಯೊಂದು ರಾಗಕ್ಕೂ ಅದರದೇ ಆದ ಒಂದು ಓಟ ಮತ್ತು ವಿಧ ಇದೆ. ಯಾವುದೇ ರಾಗದ ವಿಸ್ತರಣೆಯಾದರೂ ಸರಿ, ಕಲ್ಪನಾ ಸ್ವರರಚನೆಯಾದರೂ ಸರಿ ಅದು ನಿರ್ಬಂಧಿಸಿದ ಆ ಚೌಕಟ್ಟಿನ ಒಳಗೇ ಇರಬೇಕು.
ತಾನ
ಈ ಹಂತವನ್ನು ಮೊಟ್ಟ ಮೊದಲು ವೀಣೆಯ ಮೇಲೆ ನುಡಿಸಲಿಕ್ಕಾಗಿ ಬೆಳೆಸಲಾಯಿತು. “ಅನಂತಮ್” ಎಂಬ ಪದವನ್ನು ಪುನಃ ಪುನಃ ವಿಶೇಷ ಅಲಂಕಾರಗಳೊಂದಿಗೆ ಆವರ್ತಿಸಲಾಗುತ್ತದೆ. “ಅನಂತಮಾನಂತಮಾನಂತ….” ಎಂಬುದು “ತಾನಮ್ತಾನಮ್ತಾನಮ್…” ಎಂದು ಪದಾಂತರವಾಗಿದೆ.
ರಾಗ ತಾನ ಪಲ್ಲವಿ
ಇದು ರಾಗ ಆಲಾಪನೆ, ತಾನ ಮತ್ತು ನೆರವಲ್ ಗಳನ್ನು ಒಳಗೊಂಡ ಸಂಯುಕ್ತ ಹಂತ. ನೆರವಲ್ ಹಂತದ ನಂತರ ಪಲ್ಲವಿಯನ್ನು ಎರಡು ಬಾರಿ ಪುನರಾವರ್ತಿಸಿ, ನಂತರ ಅರ್ಧ ವೇಗದಲ್ಲಿ ಆವರ್ತಿಸಿ, ಮತ್ತೆ ದ್ವಿಗುಣ ವೇಗದಲ್ಲಿ ಮತ್ತು ನಾಲ್ಕರಷ್ಟು ವೇಗದಲ್ಲಿ ಪುನರಾವರ್ತಿಸಲಾಗುತ್ತದೆ.
ಕರ್ನಾಟಕ ಸಂಗೀತ ಕಛೇರಿ
• ಕರ್ನಾಟಕ ಸಂಗೀತ ಕಛೇರಿಗಳಲ್ಲಿ ಸಾಮಾನ್ಯವಾಗಿ ಇರುವ ಸಂಗೀತಗಾರರೆಂದರೆ: ಒಬ್ಬ ಹಾಡುಗಾರರು (ಇಲ್ಲವೇ ಪ್ರಧಾನ ವಾದ್ಯವನ್ನು ನುಡಿಸುವವರು), ಒಂದು ಪಕ್ಕವಾದ್ಯ (ಸಾಮಾನ್ಯವಾಗಿ ಪಿಟೀಲು), ಮತ್ತು ತಾಳಕ್ಕಾಗಿ ಒಂದು ವಾದ್ಯ (ಸಾಮಾನ್ಯವಾಗಿ ಮೃದಂಗ) ಸಾಮಾನ್ಯ.
• ಕಛೇರಿಗಳು ಸಾಮಾನ್ಯವಾಗಿ ಗಣಪತಿ ಸ್ತೋತ್ರದೊಂದಿಗೆ ಆರಂಭವಾಗುತ್ತವೆ. ನಂತರ ಬೇರೆ ಬೇರೆ ರಾಗಗಳಲ್ಲಿ ಅನೇಕ ಕೃತಿಗಳನ್ನು ಹಾಡಲಾಗುತ್ತದೆ. ಕಛೇರಿಯ ಅಂತ್ಯದಲ್ಲಿ ಹಗುರವಾದ ಕೃತಿಗಳು (ತಿಲ್ಲಾನ) ಅಥವಾ ಮಂಗಳವನ್ನು ಹಾಡಲಾಗುತ್ತದೆ.

ವಾದ್ಯಗಳು
ಕರ್ನಾಟಕ ಸಂಗೀತ ಕಛೇರಿಗಳಲ್ಲಿ ಸರ್ವೇಸಾಮಾನ್ಯವಾಗಿ ಉಪಯೋಗಿಸಲಾಗುವ ಪಿಟೀಲುಗಳು (ವಯೊಲಿನ್)
• ಶ್ರುತಿಗಾಗಿ ತಂಬೂರಿ ಉಪಯೋಗವಾಗುತ್ತದೆ. ಪ್ರಧಾನ ವಾದ್ಯ ಅಥವಾ ಪಕ್ಕವಾದ್ಯಗಳಿಗೆ ಸಾಮಾನ್ಯವಾಗಿ ಉಪಯೋಗಗೊಳ್ಳುವ ವಾದ್ಯಗಳು ವೀಣೆ, ವಯೊಲಿನ್ (ಪಿಟೀಲು). ಕೆಲವೊಮ್ಮೆ ಕೊಳಲು ಉಪಯೋಗಗೊಳ್ಳುತ್ತದೆ. ತಾಳಕ್ಕಾಗಿ ಉಪಯೋಗಿಸಲ್ಪಡುವ ವಾದ್ಯಗಳಲ್ಲಿ ಪ್ರಮುಖವಾದವು ಮೃದಂಗ ಮತ್ತು ಘಟ. ಇತ್ತೀಚಿನ ವರ್ಷಗಳಲ್ಲಿ ಮ್ಯಾಂಡೊಲಿನ್, ವಿಚಿತ್ರವೀಣೆ, ಸ್ಯಾಕ್ಸೋಫೋನ್ ಮೊದಲಾದ ವಾದ್ಯಗಳು ಜನಪ್ರಿಯಗೊಳಿಸಲ್ಪಟ್ಟಿವೆ.
• ಕರ್ನಾಟಕ ಸಂಗೀತದಲ್ಲಿ ಹಾಡುಗಾರಿಕೆಯ ಪ್ರಾಧಾನ್ಯ ಹೆಚ್ಚು. ವಾದ್ಯಗಳು ಸಹ ಹಾಡುಗಾರಿಕೆಯನ್ನೇ ಅನುಕರಿಸುತ್ತವೆ. ಇತ್ತೀಚೆಗೆ ಶುದ್ಧ ವಾದ್ಯ ಸಂಗೀತವೂ ಸ್ವಲ್ಪ ಮಟ್ಟಿಗೆ ಜನಪ್ರಿಯವಾಗಿದೆ.
ವ್ಯವಸ್ಥೆ
ಬಹುಪಾಲು ಕರ್ನಾಟಕ ಸಂಗೀತದ ಕಛೇರಿಗಳು ಈ ಕೆಳಗಿನ ವ್ಯವಸ್ಥೆಯನ್ನು ಅನುಸರಿಸುತ್ತವೆ.
• ವರ್ಣ – ಕಛೇರಿ ಯಾವುದಾದರೂ ವರ್ಣದ ಹಾಡುಗಾರಿಕೆಯಿಂದ (ವಾದ್ಯಗಳ ಸಂದರ್ಭದಲ್ಲಿ ನುಡಿಸುವಿಕೆಯಿಂದ) ಅರಂಭವಾಗುತ್ತದೆ. ಸಾಮಾನ್ಯವಾಗಿ ಯಾವುದಾದರೂ ಸಂಪೂರ್ಣ ರಾಗದ ವರ್ಣವನ್ನು ಆರಿಸಲಾಗುತ್ತದೆ. ಕಛೇರಿಯ ಆರಂಭವಾದದ್ದರಿಂದ ಕಲ್ಯಾಣಿ, ಧೀರ ಶಂಕರಾಭರಣ ಮೊದಲಾದ ರಾಗಗಳು ಇಲ್ಲಿ ಸಾಮಾನ್ಯ. ವರ್ಣ ಸುಮಾರು ೬-೧೨ ನಿಮಿಷಗಳಷ್ಟು ಕಾಲ ನಡೆಯುತ್ತದೆ.
• ಕೀರ್ತನೆಗಳು – ವರ್ಣದ ನಂತರ ವಿವಿಧ ರಾಗಗಳಲ್ಲಿ ಕೀರ್ತನೆಗಳನ್ನು ಹಾಡಲಾಗುತ್ತದೆ. ಕೆಲವೊಮ್ಮೆ ಕೀರ್ತನೆಯ ಮೊದಲು ರಾಗ ಆಲಾಪನೆ ಮತ್ತು ಕೊನೆಯಲ್ಲಿ ಕಲ್ಪನಾ ಸ್ವರ ಬರುವುದುಂಟು.
• ತನಿ – ಇಂದಿನ ಬಹುಪಾಲು ಕಛೇರಿಗಳಲ್ಲಿ ಒಂದು “ತನಿ ಆವರ್ತನೆ” ನಡೆಯುತ್ತದೆ. ಹಾಡುಗಾರರು ಮತ್ತು ವಯೊಲಿನ್ ನಡುವೆ ಸ್ವರ ಕಲ್ಪನೆ, ನಿರವಲ್ ಮೊದಲಾದ ಹಂತಗಳ ನಂತರ ತಾಳ ವಾದ್ಯಗಳಾದ ಮೃದಂಗ, ಘಟ ಅಥವ ಖಂಜಿರ ಮೊದಲು ಬೆರೆ ಬೆರೆಯಾಗಿ ನಂತರ ಒಟ್ಟುಗೂಡಿ ನುಡಿಸುವ ಹಂತ ತನಿ ಆವರ್ತನೆ.
• ರಾಗ ತಾನ ಪಲ್ಲವಿ – ಅನುಭವಿ ಸಂಗೀತಗಾರರು ಅನೇಕ ಕೀರ್ತನೆಗಳ ಬದಲು ರಾಗ ತಾನ ಪಲ್ಲವಿಯನ್ನು ನಡೆಸಬಹುದು.
• ದೇವರ ನಾಮಗಳು – ಹಾಡುವ ಪದ್ದತಿ ಇದೆ.
• ತಿಲ್ಲಾನ – ಕೆಲವೊಮ್ಮೆ ಕೊನೆಯಭಾಗದಲ್ಲಿ ತಿಲ್ಲಾನ ಹಾಡುತ್ತಾರೆ.
• ಮಂಗಳ – ಕಛೇರಿಯ ಕೊನೆಯಲ್ಲಿ ಹಾಡಲಾಗುವ (ಅಥವಾ ನುಡಿಸಲಾಗುವ) ಮಂಗಳ ಸಾಮಾನ್ಯವಾಗಿ ಸೌರಾಷ್ಟ್ರ ಅಥವಾ ಮಧ್ಯಮಾವತಿ ರಾಗದಲ್ಲಿರುತ್ತದೆ.

 

ಕಲೆಯನ್ನು ಮಹತ್ವಗೊಳಿಸಲು ಕಲಾ ಸಂಭ್ರಮ

ಸಹಸ್ರಾರು ಕಲಾ ಪ್ರೇಮಿಗಳು ಭಾಗವಹಿಸುವ ಕಲಾ ಸಂಭ್ರಮ ೨೦೧೯ ರಲ್ಲಿ ಪ್ರಥಮ ಬಾರಿಗೆ ಮೂರು ದಿನಗಳ ಕಾಲ ಅಂದರೆ ದಿನಾಂಕ ೮, ೯ ಮತ್ತು ೧೦ ಫೆಬ್ರವರಿ, ೨೦೧೯ರಂದು ನಡೆಯಲಿವೆ. ಇದೇ ಪ್ರಥಮಬಾರಿಗೆ ರಾಜಾಜಿನಗರದ ಮಹಾನಗರಪಾಲಿಕೆಯ ಮೈದಾನದಲ್ಲಿ ನಡೆಯಲಿದೆ. ಇದಕ್ಕೆ ಈಗಾಗಲೆ ತಯಾರಿಯನ್ನು ನಡೆಸಲಾಗಿದ್ದು, ಕಾರ್ಯಕ್ರಮದ ಸೂಚಿ ಮತ್ತು ಕಲಾವಿದರ ಪಟ್ಟಿಯೂ ಸಿದ್ಧವಾಗಿದೆ.

ಕಲಾ ಸಂಭ್ರಮ ೨೦೧೯ ರ ವಿಶೇಷವೆಂದರೆಮೂರು ದಿನಗಳ ಕಾಲ ನಡೆಯುವುದು ಇದರಲ್ಲಿ ಸಂಗೀತ, ನೃತ್ಯ, ಚಿತ್ರಕಲಾ ಪ್ರದರ್ಶನ, ವಾದ್ಯಗೋಷ್ಠಿ, ತ್ಯಾಗರಾಜರ ಆರಾಧನೆ, ಕನ್ನಡದ ಹಳೆಯ ಚಲನಚಿತ್ರ ಗೀತೆಗಳು, ಗೀತ-ಚಿತ್ರ-ನೃತ್ಯ (ಗುರು-ಶಿಷ್ಯ ಸಂವಾದ) ವಿಶೇಷ ಕಾರ್ಯಕ್ರಮಗಳ ಯೋಜನೆಯಾಗಿದೆ.

೧೦೦ ಕ್ಕೂ ಹೆಚ್ಚು ಕಲಾವಿದರ ಭಾಗವಹಿಸುವಿಕೆ, ೨೫ಕ್ಕೂ ಹೆಚ್ಚು ಚಿತ್ರಕಲಾವಿದರ ಪ್ರದರ್ಶನ ಮತ್ತು  ೮೦ಕ್ಕೂ ಹೆಚ್ಚು ಸ್ಟಾಲ್ ಗಳು.  

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ