ಗುಜರಾತ್: ಗಿರ್ ಅರಣ್ಯ ಪ್ರದೇಶದಲ್ಲಿ ಕ್ರೂರ ಕಾದಾಟಕ್ಕೆ 11 ಸಿಂಹಗಳ ಸಾವು!

ಅಹ್ಮದಾಬಾದ್: ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಗುಜರಾತ್ ಗಿರ್ ಅರಣ್ಯ ಪ್ರದೇಶದಲ್ಲಿ ನಡೆದ ಸಿಂಹಗಳ ಕ್ರೂರ ಕಾದಾಟದಲ್ಲಿ 11 ಸಿಂಹಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದೊಂದು ವಾರದಿಂದ ಗುಜರಾತ್ ಗಿರ್ ಅರಣ್ಯ ಪ್ರದೇಶದಲ್ಲಿ ಸಿಂಹಗಳ ಕಾದಾಟ ಸಾಮಾನ್ಯವಾಗಿದ್ದು, ಇದೀಗ ಈ ಕ್ರೂರ ಕಾದಾಟದಿಂದಾಗಿ ಈ ವರೆಗೂ ಸುಮಾರು 11 ಸಿಂಹಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಗಿರ್ ಅರಣ್ಯ ಪ್ರದೇಶದ ದಾಲ್ಕನಿಯಾ ರೇಂಜ್ ನಲ್ಲಿ 7 ಸಿಂಹಗಳ ಶವ ಪತ್ತೆಯಾಗಿತ್ತು. ಇದೀಗ ಇದೇ  ಪ್ರದೇಶದಲ್ಲಿ ಮತ್ತೆ 4 ಸಿಂಹಗಳ ಶವ ಪತ್ತೆಯಾಗಿದೆ. ಆ ಮೂಲಕ ಸಿಂಹಗಳ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ದೊರೆತ ಸಿಂಹಗಳ ಶವವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದ್ದು. ಈ ಹಿಂದೆ ಸತ್ತ ಸಿಂಹಗಳ ಮರಣೋತ್ತರ ಪರೀಕ್ಷೆಯಲ್ಲಿ ಸಿಂಹಗಳ ಸಾವಿಗೆ ಕಾದಾಟದಿಂದ ಆದ ಗಾಯಗಳೇ ಕಾರಣ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರು. ಪ್ರಸ್ತುತ ದೊರೆತಿರುವ ಶವಗಳನ್ನೂ ಜುನಾಘಡ್ ನಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮೇಲ್ನೋಟಕ್ಕೆ ಇದೂ ಕೂಡ ಕಾದಾಟದಿಂದ ಸಂಭವಿಸಿದ ಸಾವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತೆಯೇ ಸಿಂಹಗಳ ಸಾವಿನಲ್ಲಿ ಯಾವುದೇ ರೀತಿಯ ಷಡ್ಯಂತ್ರ ಕಾಣುತ್ತಿಲ್ಲ. ಆಹಾರ ಮತ್ತು ಸಾಂತಾನೋತ್ಪತ್ತಿ ಸಂದರ್ಭಗಳಲ್ಲಿ ವನ್ಯಮೃಗಗಳ  ಕಾದಾಟ ಸಾಮಾನ್ಯ. ಬಹುಶಃ ಇದೇ ಸಿಂಹಗಳ ಸಾವಿಗೆ ಕಾರಣವಾಗಿರಬಹುದು ಎಂದು ಗಿರ್ ಅರಣ್ಯ ಪ್ರದೇಶದ ವರಿಷ್ಢಾಧಿಕಾರಿ ಪಿ ಪುರೋಷತ್ತಮ ಹೇಳಿದ್ದಾರೆ.

ಇನ್ನು ಸಿಂಹಗಳ ಸಾವಿನ ಕುರಿತಂತೆ ಗುಜರಾತ್ ಸರ್ಕಾರ ತನಿಖೆಗೆ ಆದೇಶ ಹೊರಡಿಸಿದೆ.

2015ರಲ್ಲಿ ಗಿರ್ ಅರಣ್ಯ ಪ್ರದೇಶದಲ್ಲಿ ನಡೆದಿದ್ದ ಸಿಂಹಗಳ ಎಣಿಕೆಯಂತೆ ಅಲ್ಲಿ ಒಟ್ಟು 520 ಸಿಂಹಗಳಿದ್ದವು ಎಂದು ತಿಳಿದುಬಂದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ