
ಬೆಂಗಳೂರು, ಸೆ.21 ರಸ್ತೆ ನಿರ್ಮಾಣ ಕಾರ್ಯದಲ್ಲಿ ಬಿಟಮಿನ್ ಮಿಶ್ರಣ ಮಾಡುವಾಗ ಮಳೆ ನೀರಿನ ಅಂಶ ಜಾಸ್ತಿ ಸೇರಿದರೆ ಗುಣಮಟ್ಟ ಹಾಳಾಗಿ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಕಳಪೆ ಕಾಮಗಾರಿಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.
ಇತ್ತೀಚೆಗೆ ರಸ್ತೆ ಗುಂಡಿ ಮುಚ್ಚುವಂತೆ ಹೈಕೋರ್ಟ್ ಚಾಟಿ ಬೀಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಸ್ತೆ ನಿರ್ಮಾಣ ಹಾಗೂ ದುರಸ್ತಿಯಲ್ಲಿ ಕಳಪೆ ಕಾಮಗಾರಿಗಳು ನಡೆದಿರಬಹುದು. ನಾನು ಇಲ್ಲ ಎಂದು ಹೇಳುವುದಿಲ್ಲ. ಆದರೆ ಸಾಮಾನ್ಯವಾಗಿ ರಸ್ತೆ ಗುಂಡಿ ಹೆಚ್ಚಾಗಲು ನಿರ್ಮಾಣ ಹಂತದಲ್ಲಿನ ತಾಂತ್ರಿಕ ತೊಂದರೆಯೇ ಕಾರಣ. ಮಳೆ ಬಂದಾಗ ರಸ್ತೆ ಕಾಮಗಾರಿ ಕೈಗೆತ್ತಿಕೊಂಡರೆ ಬಿಟಮಿನ್ ಮಿಶ್ರಣ ಮಾಡುವ ವೇಳೆ ನೀರಿನ ಅಂಶ ಹೆಚ್ಚಾಗಿ ಸೇರ್ಪಡೆಯಾಗುತ್ತದೆ. ನಿರ್ಮಾಣಗೊಂಡ ರಸ್ತೆಯೂ ಸ್ವಲ್ಪ ದಿನದಲ್ಲೇ ಕಿತ್ತು ಹೋಗುತ್ತವೆ. ಗುಂಡಿಗಳು ಹೆಚ್ಚಾಗುತ್ತವೆ. ಇದು ತಾಂತ್ರಿಕವಾಗಿ ಉಂಟಾಗುವ ಸಮಸ್ಯೆ ಎಂದು ಹೇಳಿದರು.
ಬೆಂಗಳೂರು ನಗರವನ್ನು ಸ್ವಚ್ಛ ಮಾಡಬೇಕು, ಗುಂಡಿ ಇರಬಾರದು ಎಂಬ ಉದ್ದೇಶ ನಮಗೂ ಇದೆ. ಅದಕ್ಕಾಗಿ ವ್ಯವಸ್ಥಿತವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಮಳೆ ಕಾರಣಕ್ಕಾಗಿ ಕಾಮಗಾರಿಗಳು ವಿಳಂಬವಾಗಿವೆ. ಹೈಕೋರ್ಟ್ ಈ ವಿಷಯದಲ್ಲಿ ತೀರ್ಪು ನೀಡಿದೆ. ದಿನನಿತ್ಯ ಈ ರೀತಿಯ ತೀರ್ಪುಗಳು ಬರುತ್ತಲೇ ಇರುತ್ತವೆ ಎಂದು ಹೇಳಿದರು.
ಇಂದು ನಮ್ಮ ಪಕ್ಷದ ಹಿರಿಯ ನಾಯಕ, ಬಹಳ ವರ್ಷಗಳಿಂದ್ಝಲೂ ಬೆಂಗಳೂರಿನ ಶಾಸಕರಾಗಿರುವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಅವರಿಗೆ ಬೆಂಗಳೂರಿನ ಬಗ್ಗೆ ಅಪಾರ ಅನುಭವವಿದೆ. ಬಹಳಷ್ಟು ವಿಷಯ ಗೊತ್ತಿದೆ. ಹೀಗಾಗಿ ಅವರ ಸಲಹೆ ಪಡೆದಿದ್ದೇನೆ ಎಂದರು.
ಮಾಜಿ ಸಚಿವ ಸಿ.ಚನ್ನಿಗಪ್ಪ ಅವರು ಅನಾರೋಗ್ಯದಿಂದ ಸಾಗರ್ ಅಪೆÇಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನೂ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇನೆ ಎಂದು ಹೇಳಿದರು.