ಬೆಂಗಳೂರು, ಸೆ.20- ಬಿಬಿಎಂಪಿಯ ಮುಂದಿನ ಮೇಯರ್ ಯಾರಾಗಬೇಕೆಂಬ ಕುರಿತು ಸೆ.26ರಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಸಿ ಹೆಸರು ಅಂತಿಮಗೊಳಿಸಿದ್ದೇವೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಗಂಗಾಭಿಕೆ, ಸೌಮ್ಯ ಶಿವಕುಮಾರ್, ಲಾವಣ್ಯ ಗಣೇಶ್ರೆಡ್ಡಿ, ಲತಾಕುವರ್ ನಡುವೆ ಪೈಪೆÇೀಟಿ ಇದೆ. ಈ ನಾಲ್ವರಲ್ಲಿ ಯಾರ ಹೆಸರನ್ನು ಅಂತಿಮಗೊಳಿಸಬೇಕೆಂಬ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಹಾಗೂ ಶಾಸಕರು ಸಭೆ ಸೇರಿ ನಿರ್ಧರಿಸುತ್ತೇವೆ ಎಂದು ಹೇಳಿದರು.
ಅಧ್ಯಕ್ಷರು ಕೈಗೊಳ್ಳುವ ನಿರ್ಧಾರವೇ ಅಂತಿಮ. ಸೆ.26ರಂದು ಸಭೆ ನಡೆಸಿ ಹೆಸರು ಘೋಷಿಸಲಾಗುತ್ತದೆ. ಸೆ.28ರಂದು ನಡೆಯುವ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯೇ ಮೇಯರ್ ಆಗುತ್ತಾರೆ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
ಬಿಜೆಪಿಗೆ ಮೆಜಾರಿಟಿ ಇಲ್ಲ:
ಪ್ರಜಾಪ್ರಭುತ್ವದಲ್ಲಿ ಬಿಜೆಪಿಗೆ ಮೆಜಾರಿಟಿ ಇಲ್ಲ. ಆದರೂ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಹೊರಟಿದ್ದಾರೆ. 18 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳುತ್ತಾರೆ. ಹಾಗಾದರೆ ಇದು ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂಬ ಅರ್ಥತಾನೆ ಎಂದು ಇದೇ ವೇಳೆ ಸುದ್ದಿಗಾರರ ಪ್ರಶ್ನೆಗೆ ರಾಮಲಿಂಗಾರೆಡ್ಡಿ ಉತ್ತರಿಸಿದರು.
ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡುತ್ತೇವೆ ಅಂತಾರೆ. ದೇವರನ್ನು ಮಧ್ಯಕ್ಕೆ ತರಬಾರದು. ಈ ರೀತಿ ದೇವರ ಮೇಲೆ ಆಣೆ ಪ್ರಮಾಣ ಮಾಡುವುದು ಸರಿಯಲ್ಲ ಎಂದ ಅವರು, ಸಚಿವ ಸ್ಥಾನದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.