ಉದ್ಯಮಿಗಳಿಗೆ ಅನುಕೂಲವಾಗುವಂತೆ ಖಾಸಗಿ ಆರ್ಥಿಕ ನಿರ್ವಹಣಾಗಾರರ ನಿಯೋಜನೆ

ಬೆಂಗಳೂರು, ಸೆ.20- ಅಂತಾರಾಷ್ಟ್ರೀಯ ಮಟ್ಟದಲ್ಲಿ ರಫ್ತು, ಆಮದು ವಾಣಿಜ್ಯ ವಹಿವಾಟು ನಡೆಸುವ ಉದ್ಯಮಿಗಳಿಗೆ ಅನುಕೂಲವಾಗುವಂತೆ ಖಾಸಗಿ ಆರ್ಥಿಕ ನಿರ್ವಹಣಾಗಾರರನ್ನು ನಿಯೋಜಿಸುವುದಾಗಿ ಕೇಂದ್ರ ಅಬಕಾರಿ ಇಲಾಖೆಯ ರಾಜ್ಯ ಮುಖ್ಯಸ್ಥ ದಾಸ್ ಅವರು ಹೇಳಿದರು.
ಎಫ್‍ಕೆಸಿಸಿಐನಲ್ಲಿಂದು ಏರ್ಪಡಿಸಲಾಗಿದ್ದ ಉದ್ಯಮಿಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಆಮದು ಮತ್ತು ರಫ್ತು ವಹಿವಾಟಿಗೆ ದಾಖಲಾತಿಗಳ ಸಮಸ್ಯೆ ಇದೆ. ಇದಕ್ಕಾಗಿ ಸುಮಾರು ಐದಾರು ದಿನ ಕಾಲಹರಣವಾಗುತ್ತಿದೆ. ಅದನ್ನು ತಪ್ಪಿಸಬೇಕೆಂದು ಬಹಳ ದಿನಗಳಿಂದಲೂ ಉದ್ಯಮ ವಲಯಗಳಿಂದ ಬೇಡಿಕೆ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಅಬಕಾರಿ ಇಲಾಖೆ ಹಲವಾರು ಮಾರ್ಪಾಡುಗಳನ್ನು ಮಾಡಿದೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರ ಅಧಿಕೃತವಾದ ಆರ್ಥಿಕ ನಿರ್ವಹಣಾಗಾರರನ್ನು ಗುರುತಿಸಿ ಪರವಾನಗಿ ನೀಡುತ್ತಿದೆ. ಆ ರೀತಿ ಪರವಾನಗಿ ಪಡೆದ ಪಿ1, ಪಿ2, ಪಿ3 ಮಾದರಿಯ ಆರ್ಥಿಕ ನಿರ್ವಹಣಾಗಾರರು ಆಮದು ಮತ್ತು ರಫ್ತು ವಹಿವಾಟಿನ ಸರಕುಗಳನ್ನು ಪರಿಶೀಲಿಸಿ ದೃಢೀಕರಿಸಲಿದ್ದಾರೆ. ಈ ರೀತಿ ದೃಢೀಕರಿಸಿದ ದಾಖಲೆಗಳು ವಹಿವಾಟಿಗೆ ಅನುಕೂಲವಾಗಲಿದೆ. ಸಮಯವೂ ಉಳಿತಾಯವೂ ಆಗಲಿದೆ. ಅಬಕಾರಿ ಇಲಾಖೆ ಅಧಿಕಾರಿಗಳ ಕಾರ್ಯದೊತ್ತಡವೂ ಕಡಿಮೆಯಾಗಲಿದೆ ಎಂದರು.
ಆಮದು ವಹಿವಾಟು ಮಾಡುವ ಉದ್ಯಮಿಗಳು ವಿದೇಶದಲ್ಲಿ ಸರಕನ್ನು ಖರೀದಿಸಿದ ಸಂದರ್ಭದಲ್ಲೇ ಅದರ ಮೊತ್ತವೆಷ್ಟು ಎಂದು ಸ್ವಯಂಘೋಷಣೆ ಮಾಡಿಕೊಂಡರೆ ಅದರ ಆಧಾರದ ಮೇಲೆ ತೆರಿಗೆ ಪಾವತಿಸಬೇಕಿದೆ. ಅಂತಹ ಘೋಷಿತ ಸರಕುಗಳಿಗೆ ಅಬಕಾರಿ ಇಲಾಖೆ ಪ್ರತ್ಯೇಕ ಕಾರಿಡಾರ್ ವ್ಯವಸ್ಥೆ ಮಾಡಿಕೊಡಲಿದೆ ಎಂದು ತಿಳಿಸಿದರು.

ದೇಶದಲ್ಲಿ ಅಂತಾರಾಷ್ಟ್ರೀಯ ರಫ್ತು-ಆಮದು ನಡೆಸುವ 992ಮಂದಿ ಉದ್ಯಮಿಗಳಿದ್ದಾರೆ. ಅಷ್ಟೇ ಅಲ್ಲದೆ ಸಣ್ಣ ಪ್ರಮಾಣದಲ್ಲಿ ವಹಿವಾಟು ನಡೆಸುವ ಸಾವಿರಾರು ಮಂದಿ ಉದ್ಯಮಿಗಳಿದ್ದಾರೆ. ಅವರ ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆಯನ್ನು ಮಾರ್ಪಡಿಸುವುದಾಗಿ ಹೇಳಿದರು.
ಅಂತಾರಾಷ್ಟ್ರೀಯ ವಹಿವಾಟಿನ ಮೇಲೆ ಉದ್ಯಮಿಗಳು ಪಾವತಿಸುವ ಐಜಿಎಸ್‍ಟಿ ತೆರಿಗೆಗೆ ಸಂಬಂಧಪಟ್ಟಂತೆ ದಾಖಲೆಗಳನ್ನು ಪಾವತಿಸಿದರೆ ಐದು ದಿನಗಳ ಒಳಗಾಗಿ ಹೆಚ್ಚುವರಿ ತೆರಿಗೆಯಲ್ಲೂ ಮರುಪಾವತಿಸುವುದಾಗಿ ಅವರು ಭರವಸೆ ನೀಡಿದರು.

ಎಫ್‍ಕೆಸಿಸಿಐನ ಅಧ್ಯಕ್ಷ ಸುಧಾಕರ್‍ಶೆಟ್ಟಿ ಮಾತನಾಡಿ, ರಫ್ತು, ಆಮದು ವಹಿವಾಟಿನ ಮೇಲೆ ಸಾಕಷ್ಟು ಗೊಂದಲಗಳಿವೆ. ಅವುಗಳನ್ನು ಬಗೆಹರಿಸಲು ಕೇಂದ್ರ ಅಬಕಾರಿ ಇಲಾಖೆ ಸಹಾಯ ಕೇಂದ್ರವನ್ನು ಸ್ಥಾಪಿಸಬೇಕು. ಸಹಾಯ ಕೇಂದ್ರ ಸ್ಥಾಪನೆಗೆ ಎಫ್‍ಕೆಸಿಸಿಐನಲ್ಲಿ ಸ್ಥಳಾವಕಾಶ ನೀಡುವುದಾಗಿ ಭರವಸೆ ನೀಡಿದರು.
ಕನಿಷ್ಠ ವಾರಕ್ಕೊಮ್ಮೆಯಾದರೂ ಕೇಂದ್ರದ ಅಬಕಾರಿ ಅಧಿಕಾರಿಗಳು ಈ ಕೇಂದ್ರದಲ್ಲಿ ಹಾಜರಿದ್ದು, ಉದ್ಯಮಿಗಳ ಜತೆ ಸಮಲೋಚಿಸಬೇಕೆಂದು ಅವರು ಸಲಹೆ ನೀಡಿದರು.
ಯೂತ್ ಇಂಡಿಯಾ ಅಧ್ಯಕ್ಷ ಐ.ಎಸ್.ಪ್ರಸಾದ್, ಆದಾಯ ತೆರಿಗೆ ಇಲಾಖೆಯ ಜ್ಯೋತಿ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ