ಬೆಂಗಳೂರು, ಸೆ.19-ತಮ್ಮ ಕಟ್ಟಡಗಳ ಮೇಲೆ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ 1600 ಶಾಶ್ವತ ಜಾಹೀರಾತು ವಿನ್ಯಾಸ (ಸ್ಟ್ರಕ್ಚರ್) ತೆರವುಗೊಳಿಸದಿದ್ದರೆ ಅಂತಹ ಕಟ್ಟಡದ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಅಳವಡಿಸಿರುವ 1600 ಅಕ್ರಮ ಜಾಹೀರಾತು ವಿನ್ಯಾಸಗಳನ್ನು ತಕ್ಷಣ ತೆರವುಗೊಳಿಸುವಂತೆ ನ್ಯಾಯಾಲಯ ಸೂಚಿಸಿದೆ. ಅದರಂತೆ ಅಕ್ರಮ ಜಾಹೀರಾತು ವಿನ್ಯಾಸ ಹಾಕಿರುವ ಸಂಸ್ಥೆಗಳಿಗೆ ಈಗಾಗಲೇ ವೈಯಕ್ತಿಕ ನೋಟೀಸ್ ಜಾರಿ ಮಾಡಿದ್ದೇವೆ. ಆದರೆ ಅವರಿಂದ ಈವರೆಗೆ ಉತ್ತರ ಬಂದಿಲ್ಲ. ಹಾಗಾಗಿ ಜಾಹೀರಾತು ವಿನ್ಯಾಸ ತೆರವು ಕೈಗೊಳ್ಳುತ್ತೇವೆ ಎಂದು ಹೇಳಿದರು.
ಯಾವ ಕಟ್ಟಡ ಮಾಲೀಕರು ಜಾಹೀರಾತು ವಿನ್ಯಾಸ ಅಳವಡಿಸಲು ಒಪ್ಪಿಗೆ ಕೊಟ್ಟಿರುತ್ತಾರೋ ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ ನೀಡಲಾಗಿದೆ. ಜಾಹೀರಾತು ಫಲಕ ನಿಷೇಧದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗುವುದರೊಳಗೆ ನಾವು 1600 ವಿನ್ಯಾಸಗಳನ್ನು ತೆರವುಗೊಳಿಸುತ್ತೇವೆ ಎಂದರು.
ಬಿಬಿಎಂಪಿಯಿಂದ ಬಾಕಿ ಉಳಿಸಿಕೊಂಡಿರುವ ಗ್ರಂಥಾಲಯ ಸೆಸ್‍ನ್ನು ಶೀಘ್ರದಲ್ಲೇ ಪಾವತಿಸುವುದಾಗಿ ವರದಿಗಾರರ ಪ್ರಶ್ನೆಯೊಂದಕ್ಕೆ ಆಯುಕ್ತರು ಉತ್ತರಿಸಿದರು.
ಬಿಬಿಎಂಪಿ ಹೆಲ್ತ್ ಸೆಸ್, ಭಿಕ್ಷುಕರ ಸೆಸ್ ಸಂಗ್ರಹಿಸುತ್ತಿದೆ. ಈ ಹಣವನ್ನು ಆಯಾ ಇಲಾಖೆಗೆ ನೀಡಿದರೆ ಅವರು ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಸೆಸ್‍ಗಳನ್ನು ತಡೆಹಿಡಿದಿದ್ದೇವೆ. ಹೆಲ್ತ್ ಸೆಸ್‍ನಿಂದ ಅನೇಕ ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಹಾಗಾಗಿ ಈ ಹಣ ಈ ಉದ್ದೇಶಕ್ಕೆ ಬಳಕೆಯಾಗಬೇಕು.
ಭಿಕ್ಷುಕರ ಸೆಸ್ ಕೂಡ ಬೇರೆ ಜಿಲ್ಲೆಗಳಿಗೆ ಬಳಕೆಯಾಗುತ್ತಿದೆ. ಇನ್ನು ಮುಂದೆ ಈ ಸೆಸ್‍ಗಳನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕೆಂಬ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ. ಒಟ್ಟಾರೆ ಈ ಹಣವನ್ನು ಸದ್ಬಳಕೆ ಮಾಡಲಾಗುವುದು ಎಂದು ಮಂಜುನಾಥ್ ಪ್ರಸಾದ್ ಸ್ಪಷ್ಟಪಡಿಸಿದರು.