ವಿಧಾನಪರಿಷತ್‍ನ ಮೂರು ಸ್ಥಾನಗಳಿಗೆ ಕಾಂಗ್ರೆಸ್ ತೀವ್ರ ಲಾಬಿ

ಬೆಂಗಳೂರು, ಸೆ.19-ವಿಧಾನಪರಿಷತ್‍ನ ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಇದೀಗ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಲಾಬಿ ನಡೆಯುತ್ತಿದೆ. ಘಟಾನುಘಟಿ ನಾಯಕರು ಸೇರಿದಂತೆ ಹಲವರ ಆಪ್ತರು, ಜಿಲ್ಲಾಮಟ್ಟದ ನಾಯಕರು, ವಿಧಾನಪರಿಷತ್ ಸ್ಥಾನ ಗಿಟ್ಟಿಸಿಕೊಳ್ಳಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಇದೇ 28 ರಿಂದ ನಾಮಪತ್ರ ಸಲ್ಲಿಸಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಲಾಬಿ ಚುರುಕುಗೊಂಡಿದೆ.

ಕೇವಲ 3 ಸ್ಥಾನಗಳಿದ್ದರೂ 100ಕ್ಕೂ ಹೆಚ್ಚು ಆಕಾಂಕ್ಷಿಗಳು ಇರುವುದರಿಂದ ಯಾರಿಗೆ ಅವಕಾಶ ನೀಡಬೇಕೆಂಬುದು ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.
ಪಕ್ಷದ ನಾಯಕರು ಸ್ವಪ್ರತಿಷ್ಠೆಯಿಂದ ಮುಂದುವರೆಯುವರೇ ಅಥವಾ ಪಕ್ಷದ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳುವರೇ ಎಂಬುದು ಇದೀಗ ಕುತೂಹಲ ಮೂಡಿಸಿದೆ.

ವಿಧಾನಪರಿಷತ್‍ಗೆ ನಡೆಯುವ ಚುನಾವಣೆ ವೇಳೆ ಅಡ್ಡಮತದಾನ ನಡೆಸಿ ಬಿಜೆಪಿಯವರು ತಮ್ಮನ್ನು ಸೋಲಿಸುವ ಭೀತಿಯೂ ಆವರಿಸಿರುವುದರಿಂದ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಹಾಗಾಗಿ ದೆಹಲಿಯಲ್ಲಿ ಈ ಸಂಬಂಧ ವಿಚಾರ ಮಂಥನ ಮುಂದುವರೆದಿದೆ.
ಕಾಂಗ್ರೆಸ್‍ನ ಅಧಿಕೃತ ಅಭ್ಯರ್ಥಿ ಸೋತು ಮುಖಭಂಗವಾಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ಮತ್ತಷ್ಟು ಸೂಕ್ಷ್ಮವಾಗಿ ಎಲ್ಲವನ್ನು ಅವಲೋಕಿಸುತ್ತ ಆಯ್ಕೆ ನಡೆಸಲು ತೀರ್ಮಾನಿಸಿದ್ದರೆ, ಮತ್ತೊಂದೆಡೆ ಬಂಡಾಯದ ಬಿಸಿಯಿಂದ ಉಂಟಾಗಿದ್ದ ತಲ್ಲಣದಿಂದಲೂ ನಾಯಕರು ಸೂಕ್ತ ನಿರ್ಧಾರ ತಳೆಯಲು ಎಲ್ಲ ಹಂತಗಳಲ್ಲೂ ಪ್ರಯತ್ನಿಸುತ್ತಿದ್ದಾರೆ.

ಒಂದು ವೇಳೆ ಕಾಂಗ್ರೆಸ್‍ನ ಅಭ್ಯರ್ಥಿಗಳು ಸೋಲನುಭವಿಸಿದರೆ ಅದಕ್ಕೆ ಪಕ್ಷದಲ್ಲಿನ ಅಸಮಾಧಾನವೇ ಕಾರಣ ಎಂಬಂತಾಗಿ ಸರ್ಕಾರದ ಮೇಲೂ ಪರಿಣಾಮ ಬೀರಬಹುದು. ಹಾಗಾಗಿ ಕಾಂಗ್ರೆಸ್‍ಗೆ ಗೆಲ್ಲಲೇಬೇಕಾದ ಪರಿಸ್ಥಿತಿ ಉದ್ಭವಿಸಿದೆ.
ಆಕಾಂಕ್ಷಿಗಳ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಿಂದ ಮಾಜಿ ಮೇಯರ್ ರಾಮಚಂದ್ರಪ್ಪ, ಮಳವಳ್ಳಿ ಶಿವಣ್ಣ, ಮಲ್ಲಿಕಾರ್ಜುನ ಖರ್ಗೆ ಅವರು ಯು.ಬಿ.ವೆಂಕಟೇಶ್ ಅವರಿಗೆ ಅವಕಾಶ ನೀಡಲು ಲಾಬಿ ನಡೆಸುತ್ತಿದ್ದರೆ, ಇತ್ತ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ನಿವೇದಿತಾ ಆಳ್ವ, ಎಂ.ಸಿ.ವೇಣುಗೋಪಾಲ್ ಪರ ಇದ್ದಾರೆ.

ಈಗಾಗಲೇ ಎಂ.ಸಿ.ವೇಣುಗೋಪಾಲ್ ಅವರನ್ನು ಆಯ್ಕೆ ಮಾಡುವ ಸಂಬಂಧ ಸಂಸದರು ದೆಹಲಿ ಮಟ್ಟದಲ್ಲೂ ಪತ್ರ ವ್ಯವಹಾರ ನಡೆಸಿದ್ದಾರೆ. ಇನ್ನು ದಿನೇಶ್‍ಗುಂಡೂರಾವ್ ಅವರು ಗುರಪ್ಪ ನಾಯ್ಡು ಪರವಾಗಿದ್ದರೆ, ಗುಲಾಮ್‍ನಬಿ ಆಜಾದ್ ಕೋಲಾರದ ನಸೀರ್ ಅಹಮ್ಮದ್ ಪರವಾಗಿ ನಿಂತಿದ್ದಾರೆ.
ಲಿಂಗಾಯತರಿಗೆ ಅವಕಾಶ ನೀಡುವಂತೆ ಕೇಳಿ ಬರುತ್ತಿರುವ ಒತ್ತಡದಲ್ಲಿ ಕಾಂಗ್ರೆಸ್‍ನ ರಾಣಿ ಸತೀಶ್ ಅವರಿಗೆ ವಿಧಾನಪರಿಷತ್ ಸ್ಥಾನ ನೀಡಲು ಕೆಲವರು ಒತ್ತಾಯಿಸುತ್ತಿದ್ದಾರೆ.

ಪ್ರಸ್ತುತ ಖಾಲಿಯಾಗಿರುವುದು ದಲಿತರ ಕೋಟಾ. ಹಾಗಾಗಿ ಮಲ್ಲಾಜಮ್ಮ, ಮೋಟಮ್ಮ, ವಾಸಂತಿ ಶಿವಣ್ಣ, ಬಾಲು ಅವರಿಗೆ ಅವಕಾಶ ಒದಗಿಸಲು ಲಾಬಿ ನಡೆಸಲಾಗುತ್ತಿದೆ. ಇಷ್ಟೆಲ್ಲದರ ನಡುವೆ ಜಿಲ್ಲಾ ಮಟ್ಟದಲ್ಲಿ ಹಲವಾರು ನಾಯಕರು ಲಾಬಿಗೆ ಮುಂದಾಗಿರುವುದರಿಂದ 100ಕ್ಕೂ ಹೆಚ್ಚು ಆಕಾಂಕ್ಷಿಗಳ ಪರವಾಗಿ 20 ರಿಂದ 30 ಜನ ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ.
ಒಬ್ಬ ನಾಯಕರ ಪರವಾಗಿ ನಿಂತರೆ, ಮತ್ತೊಬ್ಬ ನಾಯಕರಿಗೆ ಅಸಮಾಧಾನ ಉಂಟಾಗುವ ಪರಿಸ್ಥಿತಿ ನಡುವೆ ನಾಯಕರ ಪ್ರತಿಷ್ಠೆಗೆ ಮಹತ್ವ ಸಿಗುವುದೋ ಅಥವಾ ಪಕ್ಷದ ಹಿತಾಸಕ್ತಿಗೆ ಒತ್ತು ನೀಡಲಾಗುವುದೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ